ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸಮುದಾಯದವರ ಆರ್ಥಿಕ ಸಬಲೀಕರಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಗಂಗಾ ಕಲ್ಯಾಣ ಯೋಜನೆಯಡಿ ಖುಷ್ಕಿ ಜಮೀನು ಹೊಂದಿರುವ ಸಣ್ಣ / ಅತಿ ಸಣ್ಣ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಭೂ ಒಡೆತನ ಯೋಜನೆಯಡಿ ಭೂರಹಿತ ಮಹಿಳಾ ಕೃಷಿಕಾರ್ಮಿಕರಿಗೆ ಕೃಷಿಗೆ ಯೋಗ್ಯವಾದ ಜಮೀನು ಖರೀದಿಗೆ ಸಹಾಯಧನ ಮತ್ತು ಸಾಲ ಸೌಲಭ್ಯ ನೀಡಲಾಗುತ್ತದೆ.
ಸ್ವಯಂ ಉದ್ಯೋಗ ಯೋಜನೆಯಡಿ ನೇರ ಸಾಲ ಯೋಜನೆ ಹಮ್ಮಿಕೊಳ್ಳಲಾಗಿದ್ದು, ತರಕಾರಿ, ಹಣ್ಣು-ಹಂಪಲು ಮಾರಾಟ ಮತ್ತು ಹಸು, ಕುರಿ, ಹಂದಿ, ಮೊಲ ಸಾಕಾಣಿಕೆ ಇತ್ಯಾದಿ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ನಿಗಮಗಳಿಂದ ಗರಿಷ್ಠ 50 ಸಾವಿರ ರೂಪಾಯಿಗಳವರೆಗೆ ಶೇಕಡಾ 50 ಸಾಲ ಮತ್ತು ಶೇಕಡಾ 50 ಸಹಾಯಧನ ನೀಡಲಾಗುತ್ತದೆ.
ಉದ್ಯಮಶೀಲತಾ ಯೋಜನೆಯಡಿ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಗೆ ಐ.ಎಸ್.ಬಿ. ಸ್ವಯಂ ಉದ್ಯೋಗಗಳಲ್ಲಿ ತೊಡಗಿಕೊಳ್ಳಲು ಗರಿಷ್ಠ ಒಂದು ಲಕ್ಷ ರೂಪಾಯಿಗಳವರೆಗೆ ಸಹಾಯಧನ ಹಾಗೂ ಉಳಿದ ಮೊತ್ತವನ್ನು ಬ್ಯಾಂಕ್ನಿಂದ ಸಾಲ ಕೊಡಿಸಲಾಗುವುದು. ಮೈಕ್ರೋ ಕ್ರೆಡಿಟ್ ಯೋಜನೆ ಅಡಿ ಮಹಿಳೆಯರಲ್ಲಿ ಗುಂಪು ಚಟುವಟಿಕೆಗಳಿಗೆ ಉತ್ತೇಜನ ನೀಡಲು ಮಹಿಳಾ ಸ್ವಸಹಾಯ ಸಂಘಗಳಿಗೆ ಆದಾಯ ಗಳಿಸುವ ಉತ್ಪಾದನಾ / ಸೇವಾ ಘಟಕಗಳನ್ನು ಆರಂಭಿಸಲು ಒಂದು ಗುಂಪಿಗೆ ಕನಿಷ್ಠ 2.50 ಲಕ್ಷ ರೂಪಾಯಿ ಸಹಾಯಧನ / ಸಾಲ ಸೌಲಭ್ಯ ನೀಡಲಾಗುವುದು.
ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಲಿಚ್ಚಿಸುವವರು ಸಂಬಂಧಪಟ್ಟ ವೆಬ್ ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯುವುದರ ಜೊತೆಗೆ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಬಳಿಕ ಅಪ್ಲೋಡ್ ಮಾಡಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿದ್ದು, ಖುದ್ದು ಮಾಹಿತಿಗೆ ಆಯಾ ನಿಗಮಗಳ ಜಿಲ್ಲಾ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಚೇರಿಗೆ ಭೇಟಿ ನೀಡುವ ವೇಳೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕಿದೆ.