ಬೆಳಗಾವಿ: ನಾನು ನನ್ನ ಪತ್ನಿಗೆ ಯಾವುದೇ ರೀತಿಯ ಮಾನಸಿಕ ಕಿರುಕುಳ ನೀಡಿಲ್ಲ. ಈಗ ಅವರು ನನ್ನ ಮೇಲೆ ಏಕಾಏಕಿ ಆರೋಪ ಮಾಡಿ ವಿಚ್ಛೇದನ ಕೇಳುತ್ತಿದ್ದಾರೆ ಎಂದರೆ ಅವರು ಯಾರದೋ ಒತ್ತಡಕ್ಕೆ ಸಿಲುಕಿ ಹೀಗೆ ಹೇಳುತ್ತಿದ್ದಾರೆ ಎಂದು ಚಿತ್ರ ಸಾಹಿತಿ ಕೆ.ಕಲ್ಯಾಣ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಕಲ್ಯಾಣ್, ನನ್ನ ಹಾಗೂ ನನ್ನ ಪತ್ನಿಯ ನಡುವೆ ಯಾವುದೇ ಗೊಂದಲಗಳಿಲ್ಲ. ನಾವಿಬ್ಬರು ಚೆನ್ನಾಗೇ ಇದ್ದೆವು. ಮನೆ ಕೆಲಸಕ್ಕೆ ಎಂದು ಬಂದ ಗಂಗಾ ಕುಲ್ಕರ್ಣಿಯಿಂದ ನಮ್ಮ ಸಂಸಾರದಲ್ಲಿ ಬಿರುಕು ಮೂಡಿದೆ ಎಂದರು.
ಆಸ್ತಿ ವಿಚಾರ, ಮಾನಸಿಕ ಕಿರುಕುಳ ಆರೋಪ ಕೂಡ ನನ್ನ ಮೇಲೆ ಮಾಡಲಾಗುತ್ತಿದೆ. ಆದರೆ ನಮ್ಮ ಮದುವೆಯಾಗಿ 14 ವರ್ಷ ಮುಗಿದು, 15 ವರ್ಷಗಳಾಗುತ್ತಾ ಬಂತು. ಈ 15 ವರ್ಷಗಳಿಂದ ನನಗೆ ಬೇಡವಾಗಿದ್ದ ಆಸ್ತಿಯನ್ನು ನಾನು ಈಗ ಕೇಳುತ್ತೇನಾ? ನಾನು ನನ್ನ ಪತ್ನಿಗೆ ಯಾವುದೇ ರೀತಿಯ ಮಾನಸಿಕ ಹಿಂಸೆಯನ್ನೂ ನೀಡಿಲ್ಲ. ಇಷ್ಟು ವರ್ಷ ಕಿರುಕುಳ ನೀಡದವನು ಈಗ ಕಿರುಕುಳ ಕೊಡುತ್ತೀನಾ? ಇಷ್ಟು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದವರು ನಾವು. ನಿನ್ನ ಬಿಟ್ಟು ಅರ್ಧಗಂಟೆ ಇರಲ್ಲ ಎಂದು ಹೇಳಿದ್ದ ಪತ್ನಿ ಇದೀಗ ಏಕಾಏಕಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರೆ ಯಾರದೋ ಒತ್ತಡದಿಂದ ಹೀಗೆ ಮಾಡುತ್ತಿದ್ದಾಳೆ ಎಂದರ್ಥ.
ಶಿವಾನಂದ ವಾಲಿ ನನಗೆ ಗೊತ್ತಾಗಿದ್ದು ನವೆಂಬರ್ ನಲ್ಲಿ. ಆತನಿಗೆ ಹಲವು ಬಾರಿ ಕರೆ ಮಾಡಿದ್ದಾರೆ. ನನ್ನ ಪತ್ನಿ ಬ್ಯಾಂಕ್ ಖಾತೆಯಿಂದ ಶಿವಾನಂದ ವಾಲಿಗೆ 1 ಲಕ್ಷ ಹಣ ವರ್ಗಾವಣೆಯಾಗಿದೆ. ನನ್ನ ಪತ್ನಿ ಹಲವರಿಂದ ಸಾಲ ಪಡೆದು ಹಣ ವರ್ಗಾವಣೆ ಮಾಡಿದ್ದಾರೆ. ವಿಚಾರಿಸಿದರೆ ಯಾವುದೋ ಆಸ್ತಿ ವಿಚಾರಕ್ಕೆ ಎಂದಿದ್ದಾರೆ. ನೋಡಿದರೆ ನನ್ನ ಅತ್ತೆ ಆಸ್ತಿಯನ್ನೂ ಕೂಡ ಶಿವಾನಂದ ವಾಲಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಬೆಳಗಾವಿಯಲ್ಲಿ ನನ್ನ ಅತ್ತೆ ಮನೆಯವರು ಬೇರೆ ಮನೆ ಮಾಡಿದ್ದರು. ಪತ್ನಿ ಸಂಪರ್ಕಕ್ಕೆ ಸಿಗದಿದ್ದಾಗ ನಾನು ಪೊಲೀಸರಿಗೆ ದೂರು ನೀಡಿದ ಬಳಿಕ ಪೊಲೀಸರು ಆ ಮನೆ ಬಾಗಿಲು ಒಡೆದು ನೋಡಿದ್ದಾರೆ. ಈ ವೇಳೆ ಅಲ್ಲಿ ಕೆಲ ಮಾಟ-ಮಂತ್ರಕ್ಕೆ ಸಂಬಂಧಿಸಿದ ವಸ್ತುಗಳು ಸಿಕ್ಕಿವೆ. ಈ ಬಗ್ಗೆ ಪೊಲೀಸರು ಸಂಪೂರ್ಣ ತನಿಖೆ ಮಾಡಬೇಕು. ನನ್ನ ಪತ್ನಿಗೆ ಸ್ವಲ್ಪ ಕೌನ್ಸಲಿಂಗ್ ಮಾಡಿದರೆ ನಮ್ಮ ದಾಂಪತ್ಯ ಮತ್ತೆ ಸರಿ ಹೋಗಲಿದೆ. ನಾನೇ ಆಕೆಯನ್ನು ಒಪ್ಪಿಸುತ್ತೇನೆ. ಎಲ್ಲರೂ ನಮ್ಮ ದಾಂಪತ್ಯ ಜೀವನ ಸರಿಹೋಗಿ ಪತಿ-ಪತ್ನಿ ಒಂದಾಗಲಿ ಎಂದು ಬಯಸಿದ್ದಾರೆ. ಎಲ್ಲವೂ ಸರಿ ಹೋಗಲಿದೆ ಆದರೆ ನಡೆಯುತ್ತಿರುವ ಘಟನೆ ಬಗ್ಗೆ ಕಾನೂನಿನ ಪ್ರಕಾರ ವಿಚಾರಣೆ ನಡೆಯಬೇಕು ಎಂದು ಹೇಳಿದರು.