ಆಧಾರ್ ಜೋಡಣೆ ಮಾಡದ ಅನೇಕ ಎಪಿಎಲ್ ಪಡಿತರ ಚೀಟಿದಾರರ ರೇಷನ್ ಕಾರ್ಡ್ ಗಳು ನಿಷ್ಕ್ರಿಯಗೊಂಡಿವೆ. ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರು ತಮ್ಮ ಪಡಿತರ ಚೀಟಿಗಳಿಗೆ ಆಧಾರ್ ಜೋಡಣೆ ಮಾಡಿಸಿಕೊಂಡಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯ ಎಪಿಎಲ್ ಕಾರ್ಡ್ ದಾರರು ಪಡಿತರ ಪಡೆದುಕೊಳ್ಳದ ಕಾರಣ ಆಧಾರ್ ಜೋಡಣೆ ಮಾಡಿಸಿಕೊಂಡಿಲ್ಲ.
ಮಾಹಿತಿ ಕೊರತೆಯಿಂದ ಆಧಾರ್ ಜೋಡಣೆ ಮಾಡಿಸಿಕೊಳ್ಳದ ಅನೇಕರ ರೇಷನ್ ಕಾರ್ಡ್ ಗಳು ನಿಷ್ಕ್ರಿಯಗೊಂಡಿದೆ. ಇನ್ನಷ್ಟು ಜನರ ರೇಷನ್ ಕಾರ್ಡ್ ಗಳು ನಿಷ್ಕ್ರಿಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಎಪಿಎಲ್ ಪಡಿತರ ಚೀಟಿ ಹೊಂದಿದ್ದರೂ ಆಧಾರ್ ಜೋಡಣೆ ಮಾಡದ ಮತ್ತು ಪಡಿತರ ಪಡೆಯದ ಅನೇಕರ ಕಾರ್ಡ್ ಗಳು ನಿಷ್ಕ್ರಿಯವಾಗಿವೆ ಎನ್ನಲಾಗಿದೆ. ನಿಷ್ಕ್ರಿಯ ಪಡಿತರ ಚೀಟಿ ಮತ್ತು ಮನೆಯ ಸದಸ್ಯರ ಆಧಾರ್ ಕಾರ್ಡ್ ನೊಂದಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಆಧಾರ್ ನಲ್ಲಿ ಮೊಬೈಲ್ ನಂಬರ್ ದಾಖಲಾಗಿರುವ ಮೊಬೈಲ್ ಗೆ ಬಂದ ಓಟಿಪಿ ತಿಳಿಸಿದರೆ ಮತ್ತು ಕುಟುಂಬದ ಒಬ್ಬ ಸದಸ್ಯ ಬೆರಳಚ್ಚು ನೀಡಿದರೆ ಹೊಸ ಪಡಿತರ ಚೀಟಿ ಪಡೆಯಬಹುದು. ಆಧಾರ್ ನಲ್ಲಿ ಮೊಬೈಲ್ ಸಂಖ್ಯೆ ನಮೂದಾಗಿಲ್ಲದವರು ಬೆರಳಚ್ಚು ನೀಡಬೇಕಾಗುತ್ತದೆ. ಎಪಿಎಲ್ ಪಡಿತರ ಚೀಟಿ ಚಾಲ್ತಿಯಲ್ಲಿರುವ ಬಗ್ಗೆ ಕಾರ್ಡುದಾರರು https://ahara.kar.nic.in ನಲ್ಲಿ ತಿಳಿದುಕೊಳ್ಳಬಹುದಾಗಿದೆ.