ಗೋಕರ್ಣಕ್ಕೆ ಭೂಕೈಲಾಸ; ಪರಶುರಾಮ ಭೂಮಿ ಎಂಬ ಹೆಸರೂ ಇದೆ. ಕಾರವಾರದಿಂದ ಸುಮಾರು 65 ಕಿ.ಮೀ. ದೂರದಲ್ಲಿರುವ ಈ ತಾಣ ಧಾರ್ಮಿಕ ಕ್ಷೇತ್ರವೂ ಹೌದು, ಪ್ರವಾಸಿ ತಾಣವೂ ಹೌದು. ಗೋಕರ್ಣ, ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಡಲ ತೀರದಲ್ಲಿದೆ.
ಇಲ್ಲಿ ಮಹಾಗಣಪತಿ ದೇವಾಲಯ, ಶಿವ (ಮಹಾಬಲೇಶ್ವರ) ದೇವಾಲಯಗಳು ಇದ್ದು ಇದೊಂದು ಪವಿತ್ರ ಕ್ಷೇತ್ರವಾಗಿದೆ. ದೇವಾಲಯಗಳ ಸಮೀಪದಲ್ಲೇ ಸುಂದರ ಕಡಲ ತೀರವಿದ್ದು ಇದನ್ನು ವೀಕ್ಷಿಸಲೆಂದೇ ದೇಶ-ವಿದೇಶಗಳ ಪ್ರವಾಸಿಗರು ಬರುತ್ತಾರೆ. ಗೋಕರ್ಣದಲ್ಲಿ 3 ಸಮುದ್ರ ತೀರಗಳಿದ್ದು ಅದರಲ್ಲಿ ಅರ್ಧಚಂದ್ರಾಕಾರದ ಸಮುದ್ರ ತೀರವೂ ಸೇರಿದೆ.
ಕೆಲವೊಮ್ಮೆ ಪ್ರಾಣಲಿಂಗ ಅಥವಾ ಆತ್ಮಲಿಂಗ ಎಂದೂ ಇಲ್ಲಿನ ಲಿಂಗವನ್ನು ಕರೆಯುತ್ತಾರೆ. ಈ ಧಾರ್ಮಿಕ ಕ್ಷೇತ್ರ ಕಾಶಿ ಅಥವಾ ವಾರಣಾಸಿಯ ಶಿವನ ದೇವಾಲಯಗಳಷ್ಟೇ ಪವಿತ್ರವಾದುದು ಎಂದು ಪೂಜಿಸಲಾಗುತ್ತದೆ. ಅದಲ್ಲದೆ ಪ್ರಸ್ತುತ ಏಳು ಮುಕ್ತಿ ಕ್ಷೇತ್ರಗಳಲ್ಲಿ ಇದು ಕೂಡಾ ಒಂದಾಗಿದೆ.