ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ನಟ ಜಗ್ಗೇಶ್ ಅವಮಾನ ಮಾಡಿದ್ದಾರೆ ಎನ್ನಲಾದ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ನಟ ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿದ್ದ ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಜಗ್ಗೇಶ್, ದರ್ಶನ್ ಅಭಿಮಾನಿಗಳ ಒತ್ತಡಕ್ಕೆ ಮಣಿದು ಕ್ಷಮೆಯಾಚಿಸಿದ್ದರು. ಇದೆಲ್ಲ ಪ್ರಕರಣಗಳ ಬೆನ್ನಲ್ಲೇ ಇದೀಗ ನಟ ಜಗ್ಗೇಶ್ ಹೊಸ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ತಮಗಾದ ಅವಮಾನ, ಕನ್ನಡ ಚಿತ್ರರಂಗದ ದುಃಸ್ಥಿತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ನೋವು ಹೊರಹಾಕಿದ್ದಾರೆ.
ಆಡಿಯೋ ಪ್ರಕರಣ ನನಗೆ ತುಂಬಾ ನೋವು ತಂದಿದೆ. ನನಗೆ ದುಃಖ ಆಗಿದ್ದು ಯಾಕೆಂದರೆ ನನ್ನ 40 ವರ್ಷಗಳ ಸಿನಿ ಜರ್ನಿಯನ್ನು ನೀವು ಅವಮಾನ ಮಾಡಿದ್ದೀರಿ. ನಾನು 40 ವರ್ಷಗಳ ಕಾಲ ಊಟ, ನಿದ್ದೆ ಇಲ್ಲದೇ ಬೆಳೆದವನು, ಚಾಪೆ ಹಾಸಿಕೊಂಡು ಚಿತ್ರರಂಗದಲ್ಲಿ ಬೆಳೆದವನು ಹೊರತು ಯಾರದೋ ತಲೆ ಹಿಡಿದು ಬೆಳೆದವನಲ್ಲ. ನೀವು ನನಗೆ ಮಾಡಿದ ಅವಮಾನವೂ ಒಂದೇ ಕನ್ನಡಿಗರಿಗೆ ಮಾಡಿದ ಅವಮಾನವೂ ಒಂದೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಕನ್ನಡ ಚಿತ್ರರಂಗ ಹಾಳಾಕ್ತಿದೆ, ಸರ್ವನಾಶವಾಗುತ್ತಿದೆ. ಥಿಯೇಟರ್ ಮುಂದೆ ನೂರು ಜನರು ನಿಂತರೆ ಅದಲ್ಲ ಜೀವನ…..ಒಬ್ಬೊಬ್ಬ ಪ್ರೊಡ್ಯುಸರ್ ಇಂದು ಬೀದಿಗೆ ಬರುತ್ತಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಯಾವುದಿದು ಬೂಟಾಟಿಕೆ? ನನಗೇನು ಅಭಿಮಾನಿಗಳ ಸಂಘ ಇಲ್ವಾ? 167 ಸಂಘವಿದೆ, ಕಣ್ಣಲ್ಲಿ ನೀರಾಕುತ್ತಿದ್ದಾರೆ. ಆದರೆ ಅವರೆಲ್ಲರಿಗೂ ನಾನು ಹೇಳಿದ್ದೇನೆ ಯಾವುದೇ ಪ್ರತಿಕ್ರಿಯೆ ನೀಡಬೇಡಿ ಎಂದು. ದೊಡ್ದ ದೊಡ್ಡ ಮಹಾನ್ ನಟರು ಕಟ್ಟಿದ ಕನ್ನಡ ಇಂಡಸ್ಟ್ರಿ ಹಾಳಾಗಿ ಹೋಗಬೇಕಾ…? ಡಾ.ರಾಜ್ ಕುಮಾರ್, ವಿಷ್ಟುವರ್ಧನ್, ಅಂಬರೀಷ್ ಹೋದರು. ಅವರೆಲ್ಲ ಸತ್ತ ಮಾರನೇ ದಿನವೇ ಕನ್ನಡದ ಸ್ವಾಭಿಮಾನವೂ ಸಾಯುತ್ತಿದೆ…..ನೆನಪಿರಲಿ ನಾವಿರೋದು ಇನ್ನು ಮೂರ್ನಾಲ್ಕು ಜನ ಮಾತ್ರ. ನಾನೊಬ್ಬ, ರವಿಚಂದ್ರನ್ ಒಬ್ಬ, ಶಿವರಾಜ್ ಕುಮಾರ್ ಒಬ್ಬ, ರಮೇಶ್ ಒಬ್ಬ…..ನಾವು ಸತ್ತ ಮೇಲೆ ತಿಥಿ ಮಾಡಿ ಆನಂದಿಸಿ ಎಂದು ಭಾವುಕರಾಗಿದ್ದಾರೆ.
ನಾನು ಘಟಾನುಘಟಿಗಳ ಜೊತೆ ಬೆಳೆದವನು. ನನಗೆ ಅವಮಾನ ಮಾಡಬೇಕು ಎಂಬುದು ಉದ್ದೇಶವಾಗಿದ್ದರೆ ಅದು ಸಾಧ್ಯವಿಲ್ಲ. ನಾನು ಕಾಗೆ ಹಾರಿಸೋ ಹಾಗಿದ್ರೆ 20 ಬಾರಿ ಮಂತ್ರಿ ಆಗ್ತಿದ್ದೆ. ನಾನೇನು ಅಂತಾ ಇಡೀ ಕರ್ನಾಟಕಕ್ಕೇ ಗೊತ್ತು. ಪರಿಶುದ್ಧವಾಗಿ ಬದುಕಿದವನು. ತಿನ್ನಲು ಅನ್ನವಿಲ್ಲದೇ ಕಷ್ಟಪಟ್ಟು ಸಿನಿರಂಗದಲ್ಲಿ ಬದುಕಿದವನು ನಾನು. 40 ವರ್ಷದಲ್ಲಿ 150 ಚಿತ್ರ ಮಾಡಿದ್ದೇನೆ. 29 ಚಿತ್ರ ನಿರ್ಮಿಸಿದ್ದೇನೆ. 2 ವರ್ಷ ಶಾಸಕನಾಗಿದ್ದೇನೆ. ಸ್ಟಾರ್ ಗಿರಿ ತೋರಿಸಿ ಬೂಟಾಟಿಕೆ ಮಾಡಬೇಡಿ ಎಂದು ಹೇಳಿದ್ದಾರೆ.