ಬೆಂಗಳೂರು: ಭೂ ಸೂಧಾರಣೆ ಹಾಗೂ ಎಪಿಎಂಸಿ ತಿದ್ದುಪಡಿ ಮಸೂದೆ ಕಾಯಿದೆ ವಿರೋಧಿಸಿ ನಾಳೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬಂದ್ ಗೆ ರಾಜ್ಯ ರೈತ ಸಂಘಟನೆಗಳು ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ನಾಳೆ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳು ಸಂಪೂರ್ಣ ಬಂದ್ ಆಗಲಿದೆ.
ನಾಳೆ ಅನ್ನದಾತರು ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲು ಮುಂದಾಗಿದ್ದು, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಿದ್ದಾರೆ. ಈಗಾಗಲೇ ರೈತರು ಪ್ರತಿಭಟನೆ ನಡೆಸಲು ಸಂಪೂರ್ಣ ಸಿದ್ಧತೆ ನಡೆಸಿದ್ದು, ನಾಳೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಸಂಪೂರ್ಣ ಬಂದ್ ಆಗಲಿವೆ.
ನಾಳಿನ ಪ್ರತಿಭಟನೆಗೆ ರಾಜ್ಯ ರೈತ ಸಂಘ, ಪ್ರಾಂತ್ಯ ರೈತ ಸಂಘ, ಹಸಿರು ಸೇನೆ, ಕೂಲಿಕಾರರ ಸಂಘ, ಆಶಾ ಮತ್ತು ಜನಶಕ್ತಿ ಸಂಘಟನೆ ಸೇರಿ ಹಲವು ಸಂಘಟನೆಗಳು ಬೆಂಬಲ ನೀಡಿವೆ. ನಿನ್ನೆ ಮಾಡಿದ ಘೋಷಣೆಯಂತೆಯೇ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ನಾಳೆ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆ ಮಾರ್ಗಗಳು ಸ್ತಬ್ಧಗೊಳ್ಳಲಿದ್ದು, ಮೈಸೂರು ರಸ್ತೆ, ಪುಣೆ-ಬೆಂಗಳೂರು ಹೆದ್ದಾರಿ, ಕನಕಪುರ ರಸ್ತೆ, ಬೆಂಗಳೂರು ಬಳ್ಳಾರಿ ರಸ್ತೆ ಸಂಪೂರ್ಣ ಬಂದ್ ಆಗಲ್ಲಿದ್ದು, ಹೆದ್ದಾರಿಗಳಲ್ಲಿ ರೈತರ ಪ್ರತಿಭಟನೆ ಭುಗಿಲೇಳಲಿವೆ.