ಬೆಂಗಳೂರು: ಉಪಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಆರ್.ಆರ್.ನಗರ ಹಾಗೂ ಶಿರಾ ಮಿನಿ ಮಹಾಸಮರದ ಫಲಿತಾಂಶ ಹೊರಬೀಳಲಿದೆ. ಗೆಲುವು ಯಾರದ್ದೇ ಆದರೂ ಗೆದ್ದ ಅಭ್ಯರ್ಥಿಗಳು ಈ ಬಾರಿ ಯಾವುದೇ ರೀತಿಯ ಸಂಭ್ರಮಾಚರಣೆ ಮಾಡಲು ಅವಕಾಶವಿಲ್ಲ.
ಕೋವಿಡ್ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮ ಕೈಗೊಂಡು, ನಿಯಮಾವಳಿಗಳನ್ನು ಪಾಲಿಸಿ ಮತ ಎಣಿಕೆ ಮಾಡಬೇಕು. ಬೆಳಿಗ್ಗೆ 7:45ಕ್ಕೆ ಸ್ಟ್ರಾಂಗ್ ರೂಂ ತೆರೆಯಲಾಗುತ್ತಿದ್ದು, ಬೆಳಿಗ್ಗೆ 8ರಿಂದ ಮತ ಎಣಿಕೆ ಆರಂಭವಾಗಿ ಮಧ್ಯಾಹ್ನ 12:30ರಿಂದ 1ಗಂಟೆ ವೇಳೆಗೆ ಮತ ಎಣಿಕೆ ಮುಗಿಯುವ ನಿರೀಕ್ಷೆಯಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಮತ ಎಣಿಕೆ ಹಿನ್ನೆಲೆಯಲ್ಲಿ ಆರ್.ಆರ್.ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ನಾಳೆ ಬೆಳಿಗ್ಗೆ 6ಗಂಟೆಯಿಂದ ರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದ್ದು, ಮದ್ಯ ಮಾರಾಟಕ್ಕೆ ಅವಕಾಶವಿರುವುದಿಲ್ಲ. ಶಾಂತಿಯುತ ಮತ ಎಣಿಕೆಗಾಗಿ ನಾಲ್ಕು ಹಂತದ ಭದ್ರತೆ ಒದಗಿಸಲಾಗುತ್ತಿದೆ. ಗೆದ್ದ ಅಭ್ಯರ್ಥಿಗಳು ಸಂಭ್ರಮಾಚರಣೆಯಲ್ಲಿ ತೊಡಗುವಂತಿಲ್ಲ. ಪಟಾಕಿ ಸಿಡಿಸಲು ಯಾವುದೇ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.