ಕೃಷ್ಣ ಸರಣಿ ಖ್ಯಾತಿಯ ಯಶಸ್ವಿ ನಾಯಕ ಕೃಷ್ಣ ಅಜಯ್‍ರಾವ್ ನಾಯಕನಾಗಿ ಅಭಿನಯಿಸಿರುವ 26ನೇ ಚಿತ್ರ “ಕೃಷ್ಣ ಟಾಕೀಸ್” ಚಿತ್ರ ಏ.16 ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಟ ಹಾಗೂ ರಂಗಕರ್ಮಿ ವೈದ್ಯ ತಿಳಿಸಿದರು.
ಅವರು ಇಂದು ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಈ ಚಿತ್ರದಲ್ಲಿ ಶಿವಮೊಗ್ಗದ ಮೂವರು ರಂಗಭೂಮಿ ಕಲಾವಿದರು ಗಮನಾರ್ಹ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದರು.
ಚಿತ್ರದಲ್ಲಿ ನಾನು ಸೇರಿದಂತೆ ನಿವೃತ್ತ ಪ್ರಾಚಾರ್ಯೆ ಹಾಗೂ ರಂಗ ಕಲಾವಿದೆ ವಿಜಯಲಕ್ಷ್ಮೀ ಹಾಗೂ ಚಲನಚಿತ್ರ ಸಂಘಟನಾ ಕಲಾವಿದ ಶಿವಮೊಗ್ಗ ರಾಮಣ್ಣ ಅಭಿನಯಿಸಿದ್ದೇವೆ. ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಚಿತ್ರದ ಬಿಡುಗಡೆಯ ಪೂರ್ವಭಾವಿ ಸಮಾರಂಭ ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು ಎಂದು ತಿಳಿಸಿದರು.
ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನು ಹೊಂದಿರುವ ಈ ಚಿತ್ರಕ್ಕೆ ಬಾಲ್ಕನಿ ಸೀಟ್ ನಂ.13 ಎಂಬ ಅಡಿ ಬರಹ ಕೂಡಾ ಇದೆ. ಈ ಚಿತ್ರ ಲಕ್ನೋನಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ. ನಟ ಅಜಯ್‍ರಾವ್ ಈ ಚಿತ್ರದಲ್ಲಿ ಪತ್ರಕರ್ತರಾಗಿ ಕಾಣಿಸಿಕೊಂಡಿದ್ದಾರೆ. 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಗಮನ ಸೆಳೆದಿದ್ದ ಅನಂದಪ್ರಿಯ ಅವರು ಕಾಶಿನಾಥ್ ರವರ ಕೊನೆಯ ಚಿತ್ರ “ಒಳ್ ಮುನ್ಸಮಿ” ಚಿತ್ರಕ್ಕೆ ಸ್ವತಂತ್ರ ನಿರ್ದೇಶನ ಮಾಡಿದ್ದು, ಇದೀಗ ವಿಜಯಾನಂದ್ ಹೆಸರಿನಲ್ಲಿ ಕೃಷ್ಣ ಟಾಕೀಸ್ ನಿರ್ದೇಶಿಸಿದ್ದಾರೆ ಹಾಗೂ 10 ಕ್ಕೂ ಹೆಚ್ಚು ಮೆಘಾ ಧಾರವಾಹಿಗಳಿಗೆ ಸಂಭಾಷಣೆ ಬರೆದಿರುವ ಇವರು 45 ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಿತ್ಯ ಹಾಗೂ ಸಂಭಾಷಣೆ ಬರೆದಿದ್ದಾರೆ. ಕೃಷ್ಣ ಟಾಕೀಸ್‍ಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ ಎಂದರು.