ಹಾಸನ: ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನ ಜಿಲ್ಲೆಯ ಶಕ್ತಿ ದೇವತೆ ಹಾಸನಾಂಬೆ ದೇವಾಲಯದ ಬಾಗಿಲನ್ನು ನಾಳೆ ಮುಚ್ಚಲು ಜಿಲ್ಲಾಡಳಿತ ನಿರ್ಧರಿಸಿದೆ. ಒಂದು ದಿನ ಮುಂಚಿತವಾಗಿಯೇ ದೇವಾಲಯದ ಬಾಗಿಲು ಮುಚ್ಚುತ್ತಿರುವುದಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಪ್ರದಾಯದ ಪ್ರಕಾರ ಬಲಿಪಾಡ್ಯಮಿ ಮಾರನೇ ದಿನ, ಮಂಗಳವಾರ ಹಾಸನಾಂಬೆ ದೇವಾಲಯದ ಬಾಗಿಲು ಮುಚ್ಚಬೇಕು. ಆದರೆ ಈ ಬಾರಿ ಜಿಲ್ಲಾಡಳಿತ ಒಂದು ದಿನ ಮುಂಚಿತವಾಗಿ ನಾಳೆಯೇ ಬಾಗಿಲು ಮುಚ್ಚಲು ಮುಂದಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಭಕ್ತರು, ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯಗಳನ್ನು ಮುರಿದು, ಶಾಸ್ತ್ರಕ್ಕೆ ವಿರುದ್ಧವಾಗಿ ದೇವಾಲಯದ ಬಾಗಿಲನ್ನು ಮುಚ್ಚುತ್ತಿರುವುದು ಸರಿಯಲ್ಲ ಎಂದು ಕಿಡಿ ಕಾರಿದ್ದಾರೆ.
ನವೆಂಬರ್ 5ರಿಂದ ಹಾಸನಾಂಬೆ ದೇಗುಲದ ಬಾಗಿಲು ತೆರೆಯಲಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶಗಳನ್ನು ನೀಡಿರಲಿಲ್ಲ. ಅಲ್ಲದೇ ಈ ಬಾರಿ ಒಂದು ದಿನ ಮುಂಚಿತವಾಗಿ ನ.16ರಂದು ದೇಗುಲದ ಬಾಗಿಲು ಮುಚ್ಚಲಾಗುತ್ತಿದೆ.