ದಾವಣಗೆರೆ: ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಯಾರೋ ಒಬ್ಬರು ಸೋತವರು ದೆಹಲಿಗೆ ಹೋಗಿ ಲಾಬಿ ಮಾಡಿದ ತಕ್ಷಣ ಮುಖ್ಯಮಂತ್ರಿ ಹುದ್ದೆ ಬದಲಾವಣೆಯಾಗಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಎಂಬುದು ಅಪಪ್ರಚಾರ. ಇದೊಂದು ಊಹಾಪೋಹವಷ್ಟೇ. ಯಡಿಯೂರಪ್ಪನವರೇ ನಮ್ಮ ಪ್ರಶ್ನಾತೀತ ನಾಯಕ. 2023ರರ ಚುನಾವಣೆಗೂ ಬಿ ಎಸ್ ವೈ ಮಾರ್ಗದರ್ಶನದಲ್ಲೇ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಸೋತ ವ್ಯಕ್ತಿಯನ್ನು ಮಂತ್ರಿ ಮಾಡಿದ್ದಕ್ಕೆ ಸಿಎಂ ಬದಲಾವಣೆ ಎಂಬ ಅಪಪ್ರಚಾರದ ಪ್ರತಿಫಲ ಸಿಕ್ಕಿದೆ. ಕೊರೊನಾದಂತಹ ಸಂದರ್ಭದಲ್ಲಿ ಜನರ ಪರ ಕೆಲಸ ಮಾಡುವುದನ್ನು ಬಿಟ್ಟು ದೆಹಲಿಯಲ್ಲಿ ಲಾಬಿ ನಡೆಸುತ್ತಿರುವುದು ಎಷ್ಟು ಸರಿ? ಜನರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಗ ನಾವು ರಾಜಕಾರಣ ಮಾಡುವುದು ಸರಿಯಲ್ಲ ಎಂದು ಸರಣಿ ಟ್ವೀಟ್ ಮೂಲಕ ರೇಣುಕಾಚಾರ್ಯ ತಿಳಿಸಿದ್ದಾರೆ.