ಬೆಂಗಳೂರು: ನಾನು ರಾಜಕೀಯದಿಂದಲೇ ನಿವೃತ್ತಿಯಾಗಬೇಕು ಎಂದುಕೊಂಡಿದ್ದೆ. ಆದರೆ ಜನರು ನಮಗೆ ತೋರುವ ಪ್ರೀತಿ ನೋಡಿ ಅವರಿಗೆ ಅನ್ಯಾಯವಾಗಬಾರದು ಎಂದು ಸುಮ್ಮನಾಗಿದ್ದೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಬ್ಯಾಡರಹಳ್ಳಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಚುನಾವಣೆಯಲ್ಲಿ ಮಗ ನಿಖಿಲ್ ಸೋಲು ನೆನೆದು ಮತ್ತೊಮ್ಮೆ ಕಣ್ಣೀರಾಗಿದ್ದಾರೆ. ಚುನಾವಣೆಗೆ ನಿಲ್ಲುವುದು ಬೇಡ ಎಂದು ಹೇಳಿದ್ದೆ. ಆದರೆ ಎಲ್ಲರೂ ಸೇರಿ ನಿಖಿಲ್ ನನ್ನು ಚುನಾವಣೆಗೆ ನಿಲ್ಲಿಸಿ, ಪ್ಲಾನ್ ಮಾಡಿ ಸೋಲಿಸಿದ್ರು. ಎಲ್ಲರೂ ಸೇರಿ ನಮ್ಮನ್ನು ಮುಗಿಸಿದ್ದಾರೆ ಎಂದು ಭಾವುಕರಾದರು.
ಮಗನನ್ನು ಸೋಲಿಸಿದ್ದಕ್ಕೆ ಮಂಡ್ಯ ಜಿಲ್ಲೆಯ ಬಗ್ಗೆ ನಮಗೆ ಬೇಸರವಿಲ್ಲ. ಜಿಲ್ಲೆಯ ಜನರು ಮುಗ್ಧರು, ಎಲ್ಲರನ್ನೂ ನಂಬುತ್ತಾರೆ. ಆದರೆ ನಿಖಿಲ್ ಸೋಲು ಸದಾ ಕಾಡುತ್ತೆ ಎಂದು ಕಣ್ಣೀರಾದರು. ನನಗೆ ರಾಜಕೀಯವಾಗಿ ಮುಂದುವರೆಯುವ ಆಸಕ್ತಿ ಇಲ್ಲ. ನಾನು ನಿವೃತ್ತಿಯಾಗಬೇಕು ಎಂದು ಬಯಸಿದ್ದೆ. ಆದರೆ ನಾನು ರಾಜಕೀಯದಿಂದ ನಿವೃತ್ತಿಯಾದರೆ ಜನರಿಗೆ ಅನ್ಯಾಯ ಮಾಡಿದಂತಾಗುತ್ತೆ ಎಂಬ ಕಾರಣಕ್ಕೆ ಮುಂದುವರಿದಿದ್ದೇನೆ ಎಂದರು.