ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪಿನಿಂದ ನನಗೆ ನ್ಯಾಯ ದೊರಕಿದೆ. 2018ರಿಂದ ಇಂದಿನವರೆಗೆ ನಾನು ಅನುಭವಿಸಿದ್ದ ನೋವಿಗೆ ಇಂದು ಮುಕ್ತಿ ಸಿಕ್ಕಿದೆ ಎಂದು ಮುನಿರತ್ನ ತಿಳಿಸಿದ್ದಾರೆ.
ಚುನಾವಣೆ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಮುನಿರತ್ನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಬಿಜೆಪಿಯ ತುಳಸಿ ಮುನಿರಾಜು ಅವರ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್ ಇದೀಗ ಆರ್.ಆರ್. ನಗರಕ್ಕೆ ನ.3ರಂದು ಉಪಚುನಾವಣೆ ನಡೆಸಲು ಯಾವುದೇ ಅಡ್ಡಿಯಿಲ್ಲ ಎಂದು ತಿಳಿಸಿದೆ.
ಸುಪ್ರೀಂ ತೀರ್ಪು ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಮುನಿರತ್ನ, 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದ ನನ್ನ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಮುನಿರಾಜು ಹೈಕೋರ್ಟ್ ಮೆಟ್ಟಿಲೇರಿದ್ದರು. ನಾನು ಗೆದ್ದಿರುವ 25 ಸಾವಿರ ವೋಟ್ ಗಳು ನಕಲಿ ವೋಟ್ ಗಳು ಎಂದು ಆರೋಪಿಸಿದ್ದರು.
ಈ ಬಗ್ಗೆ ಮಾಧ್ಯಮಗಳಲ್ಲೂ ಸಾಕಷ್ಟು ಸುದ್ದಿ ಪ್ರಸಾರವಾಗುತ್ತಲೇ ಇತ್ತು. ನಕಲಿ ವೋಟು…ನಕಲಿ ವೋಟು…..ಎಂಬ ನನ್ನ ಮೇಲಿನ ಆರೋಪ ಕೇಳಿ ಕೇಳಿ ತುಂಬಾ ಮನ ನೊಂದಿದ್ದೆ. ಪ್ರತಿ ದಿನ ಈ ಆರೋಪದಿಂದ ಬೇಸರವಾಗುತ್ತಿತ್ತು. ಹೈಕೋರ್ಟ್ ಕೂಡ ಮುನಿರಾಜು ಅರ್ಜಿ ವಜಾಗೊಳಿಸಿತ್ತು. ಆದಾಗ್ಯೂ ಅವರು ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಸುಪ್ರೀಂಕೋರ್ಟ್ ಕೂಡ ನಾನು ಪಡೆದಿರುವ 25 ಸಾವಿರ ವೋಟು ನಕಲಿಯಲ್ಲ ಅಸಲಿ. ಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಸುಪ್ರೀಂ ಕೋರ್ಟ್ ಕೂಡ ನನ್ನ ಪರವಾಗಿ ತೀರ್ಪು ನೀಡಿರುವುದು ನನಗೆ ಮತ್ತೊಮ್ಮೆ ಜಯಸಿಕ್ಕಂತಾಗಿದೆ ಎಂದಿದ್ದಾರೆ.
ಹಿಂದೆ ನಾನು ಕೂಡ ಬೇರೆ ಪಕ್ಷದಲ್ಲಿದ್ದೆ. ಇದೀಗ ನಾನು ಬಿಜೆಪಿಗೆ ಬಂದಿದ್ದೇನೆ. ತುಳಸಿ ಮುನಿರಾಜು ಬಗ್ಗೆ ಅಸಮಾಧಾನವಿಲ್ಲ. ಅವರಿಗೂ ಒಳ್ಳೆಯದಾಗಲಿ ಎಂದರು. ಇನ್ನು ಆರ್.ಆರ್.ನಗರ ಟಿಕೆಟ್ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳಲಿದೆಯೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ನನಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯ ಎಂದು ಹೇಳಿದರು.