ಕೊರೊನಾದಿಂದಾಗಿ ಎಲ್ಲಾ ಉದ್ಯಮಗಳಿಗೂ ಹೊಡೆತ ಬಿದ್ದಿದೆ. ಇದರಿಂದ ದೇವಸ್ಥಾನಗಳೇನು ಹೊರತಾಗಿಲ್ಲ.
ಕೊರೊನಾ ಇದ್ದಿದ್ದರಿಂದ ದೇವಸ್ಥಾನಗಳನ್ನೂ ಮುಚ್ಚಲಾಗಿತ್ತು. ಆದರೆ ಇದೀಗ ದೇವಸ್ಥಾನಗಳನ್ನು ತೆರೆದಿದ್ದರೂ ದೇವಸ್ಥಾನಗಳಿಗೆ ಬರುವ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಇದರಿಂದ ಆದಾಯಕ್ಕೂ ಹೊಡೆತ ಬಿದ್ದಿದೆ.
ಆದರೆ ನಾಡದೇವತೆ ಚಾಮುಂಡೇಶ್ವರಿಗೆ ಮಾತ್ರ ಆದಾಯ ಹೆಚ್ಚಳವಾಗಿದೆ. ನವೆಂಬರ್ ತಿಂಗಳಲ್ಲಿ ಕೋಟಿ ರೂಪಾಯಿಗೂ ಹೆಚ್ಚು ಹಣ ಬಂದಿದ್ದು, ಹೆಚ್ಚಿನ ಆದಾಯ ಹರಿದು ಬಂದಿದೆ. ದೇವಸ್ಥಾನದಲ್ಲಿ ನವೆಂಬರ್ ತಿಂಗಳ ಹುಂಡಿ ಎಣಿಕೆಯನ್ನು ಮಾಡಲಾಗಿದೆ. ಹುಂಡಿಯಲ್ಲಿ ಒಟ್ಟು 1,14,18,628 ರೂಪಾಯಿ ಸಂಗ್ರಹವಾಗಿದೆ.
ವಿಶೇಷ ಸಂದರ್ಭಗಳಲ್ಲಿ ಹೆಚ್ಚಿನ ಜನ ಸೇರುತ್ತಾರೆ ಹಾಗೂ ಇಂತಹ ಸಮಯದಲ್ಲಿ ರೋಗ ಹೆಚ್ಚಾಗಿ ಹರಡುವ ಸಾಧ್ಯತೆ ಇದೆ ಅಂತ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಇಷ್ಟಾದರೂ ಆದಾಯದಲ್ಲಿ ಕಡಿಮೆಯಾಗಿಲ್ಲ. ಕೊರೊನಾ ಸಮಯದಲ್ಲಿ ಹೆಚ್ಚಿನ ಆದಾಯ ಬಂದಿದೆ. ಇನ್ನು ಹುಂಡಿಯಲ್ಲಿ ಬ್ಯಾನ್ ಆದ ಸಾವಿರ ಹಾಗೂ ಐನೂರು ರೂಪಾಯಿಯ ನೋಟುಗಳು ಪತ್ತೆಯಾಗಿವೆ.