ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯಲಿದ್ದು, ಬಿಡುಗಡೆಯ ಭಾಗ್ಯ ಸಿಗಲಿದೆಯಾ ಎಂಬ ಕುತೂಹಲ ಮನೆಮಾಡಿದೆ.
ಐಷಾರಾಮಿ ಜೀವನ ನಡೆಸಿದ್ದ ಈ ನಟಿಮಣಿಯರು ಇದೀಗ ಜೈಲು ಜೀವನ ನಡೆಸುವಂತಾಗಿದ್ದು, ಅವರುಗಳ ವಿರುದ್ಧ ಕಠಿಣ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿರುವುದರಿಂದ ಜಾಮೀನು ಸಿಗುವುದು ಅಷ್ಟು ಸುಲಭವಿಲ್ಲ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.
ರಾಗಿಣಿ ಹಾಗೂ ಸಂಜನಾ ಈಗಾಗಲೇ ತಮ್ಮ ತಮ್ಮ ಪರ ವಕೀಲರ ಬಳಿ ಮಾತನಾಡಿದ್ದಾರೆಂದು ಹೇಳಲಾಗುತ್ತಿದ್ದು, ಇಬ್ಬರು ನಟಿಯರು ಈಗ ತಮ್ಮ ಜಾಮೀನು ಅರ್ಜಿಯ ವಿಚಾರಣೆ ಕುರಿತಂತೆ ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. ಒಂದೊಮ್ಮೆ ಜಾಮೀನು ಅರ್ಜಿ ತಿರಸ್ಕೃತಗೊಂಡರೆ ಮತ್ತಷ್ಟು ದಿನಗಳ ಕಾಲ ಜೈಲುವಾಸ ಮುಂದುವರೆಯಲಿದೆ.