ಕೊರೊನಾ ಕಾರಣಕ್ಕೆ ಲಾಕ್ ಡೌನ್ ಘೋಷಣೆಯಾಗಿದ್ದ ಪರಿಣಾಮ ನಿಗದಿಯಾಗಿದ್ದ ಬಹುತೇಕ ಮದುವೆಗಳು ಮುಂದೂಡಲ್ಪಟ್ಟಿದ್ದವು. ಅಲ್ಲದೆ ಕೆಲವರು ನಿಗದಿಯಾದ ದಿನದಂದೇ ಮದುವೆ ಸಮಾರಂಭ ನೆರವೇರಿಸಬೇಕೆಂಬ ಕಾರಣಕ್ಕೆ ಕುಟುಂಬ ಸದಸ್ಯರ ಮುಂದೆ ಸರಳವಾಗಿ ಮದುವೆಯಾಗಿದ್ದರು.
4ನೇ ಹಂತದ ಲಾಕ್ ಡೌನ್ ಸಡಿಲಿಕೆ ವೇಳೆ ಸೀಮಿತ ಅತಿಥಿಗಳ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆಸಲು ಅವಕಾಶ ನೀಡಲಾಗಿತ್ತು. ಹೀಗಾಗಿ ಅಂದಿನಿಂದ ಕಲ್ಯಾಣ ಮಂಟಪಗಳಲ್ಲಿ ಮದುವೆ ಸಮಾರಂಭಗಳು ನಡೆಯುತ್ತಿವೆ. ಮುಂದೂಡಲ್ಪಟ್ಟಿದ್ದ ಮದುವೆಗಳ ಜೊತೆಗೆ ಹೊಸದಾಗಿ ಮದುವೆಯಾಗುವವರೂ ಸಹ ಕಲ್ಯಾಣ ಮಂಟಪಗಳಲ್ಲಿ ವೈವಾಹಿಕ ಬದುಕಿಗೆ ಕಾಲಿಡುತ್ತಿದ್ದಾರೆ.
ಇದರ ಮಧ್ಯೆ ನವೆಂಬರ್ 26ರ ತುಳಸಿ ಹಬ್ಬದಂದು ಅತ್ಯಂತ ಒಳ್ಳೆಯ ಶುಭಮುಹೂರ್ತವಿದೆ ಎಂಬ ಕಾರಣಕ್ಕೆ ಒಂದು ರಾಜ್ಯದಲ್ಲಿ ಸಾವಿರಾರು ಮದುವೆಗಳು ನಡೆಯುತ್ತಿದ್ದವು ಬಹುತೇಕ ಎಲ್ಲ ಕಲ್ಯಾಣಮಂಟಪಗಳು ಭರ್ತಿಯಾಗಿವೆ. ನವೆಂಬರ್ 26 ಗುರುವಾರ ಉತ್ಥಾನ ದ್ವಾದಶಿಯಾಗಿದ್ದು, ನಾರಾಯಣ, ತುಳಸಿ ದೇವಿಯನ್ನು ವಿವಾಹವಾದ ದಿನವೆಂದು ಪರಿಗಣಿಸಲಾಗಿದೆ. ಹೀಗಾಗಿ ಇಂತಹ ಶ್ರೇಷ್ಠ ದಿನದಂದು ವೈವಾಹಿಕ ಬದುಕಿಗೆ ಕಾಲಿಟ್ಟರೆ ಅದೃಷ್ಟವೆಂಬ ಕಾರಣಕ್ಕೆ ಅಂದು ಸಾವಿರಾರು ಮದುವೆಗಳು ನಡೆಯುತ್ತಿವೆ.