ಬೆಂಗಳೂರು: ಕೊರೊನಾ ಮುಗಿದ ಬಳಿಕ ಶಾಸಕರು ಏನೆಂಬುದನ್ನು ತೋರಿಸುತ್ತೇವೆ. ಸಿಎಂ ವಿರುದ್ಧ ಮಾತನಾಡುವುದಾದರೆ ಸಚಿವ ಸಿ.ಪಿ.ಯೋಗೇಶ್ವರ್ ರಾಜೀನಾಮೆ ನೀಡಲಿ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನು ಸಂಪುಟದಿಂದ ವಜಾ ಮಾಡುವಂತೆ ಆಗ್ರಹಿಸಿ ಸಿಎಂ ಯಡಿಯೂರಪ್ಪನವರಿಗೆ ಸಹಿ ಸಂಗ್ರಹ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ರೇಣುಕಾಚಾರ್ಯ, ನಮಗೆ ಸಿಕ್ಸರ್, ಬೌಂಡರಿ ಬಾರಿಸೋದು ಗೊತ್ತು, ಕ್ಯಾಚ್ ಹಿಡಿಯುವುದೂ ಗೊತ್ತು. ಕೊರೊನಾ ಮುಗಿಯಲಿ ಶಾಸಕರು ಏನೆಂಬುದು ಗೊತ್ತಾಗುತ್ತದೆ ಎಂದರು.
ಚೆನ್ನಪಟ್ಟಣದಲ್ಲಿ ಸೋತವರ ಮೂಲ ಬಿಜೆಪಿಯಲ್ಲ. ಅವರಿಗೆ ಸಂಘಟನೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸೋತರೂ ಎಂಎಲ್ ಸಿ ಮಾಡಿ, ಬಳಿಕ ಸಚಿವ ಸ್ಥಾನ ನೀಡಿದ್ದಕ್ಕೆ ಸಿಎಂ ವಿರುದ್ಧವೇ ಮಾತನಾಡುತ್ತಿದ್ದಾರೆ. ಸಿಎಂ ವಿರುದ್ಧ ಮಾತನಾಡುವುದಾದರೆ ಮೊದಲು ರಾಜೀನಾಮೆ ನೀಡಲಿ ಎಂದು ಹೇಳಿದರು.