ಕೊರೊನಾ ಮಹಾಮಾರಿಯಿಂದಾಗಿ ಎಲ್ಲಾ ಕೆಲಸಗಳು ಕೂಡ ಸರಿಯಾದ ರೀತಿ ಆಗುತ್ತಿಲ್ಲ. ಇದೀಗ ಸೋಂಕಿತರ ಸಂಖ್ಯೆ ಏರಿಕೆಯಾದಂತೆ ಆಯಾಯ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಕೊರೊನಾದಿಂದಾಗಿ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಮಕ್ಕಳಿಗೆ ಆನ್‌ಲೈನ್ ತರಗತಿ ಮಾಡಲಾಗುತ್ತಿದೆ. ಆದರೆ ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರಕ್ಕೆ ಶಿಕ್ಷಕರನ್ನು ಹಾಜರಾಗುವಂತೆ ನಿದೇರ್ಶನ ನೀಡಲಾಗಿದೆ.
ಈ ಆದೇಶಕ್ಕೆ ಹಲವಾರು ಶಿಕ್ಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡುವಂತೆಯೇ ಶಿಕ್ಷಕರಿಗೂ ಆನ್‌ಲೈನ್ ಮೂಲಕ ತರಬೇತಿ ನೀಡಬೇಕು. ಆದರೆ ನಿಗದಿತ ಸ್ಥಳ, ದಿನಗಳಲ್ಲಿ ಖುದ್ದು ತರಬೇತಿಗೆ ಹಾಜರಾಗುವಂತೆ ನಿರ್ದೇಶನ ನೀಡಿರುವುದು ಎಷ್ಟರಮಟ್ಟಿಗೆ ಸರಿ ಎನ್ನುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನ ಡಯಟ್‌ನಲ್ಲಿ ಬೇರೆ ಬೇರೆ ತಾಲೂಕಿನ 20 ಶಾಲೆಯ ಶಿಕ್ಷಕರನ್ನು ಆಯ್ಕೆ ಮಾಡಿ ಅವರಿಗೆ ಜುಲೈ 15 ರಿಂದ ಸುಮಾರು15 ದಿನಗಳ ಕಾಲ ಇಂಗ್ಲಿಷ್ ಭಾಷೆಯ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಇದನ್ನು ಆನ್‌ಲೈನ್‌ನಲ್ಲಿಯೇ ಮಾಡಿದ್ದರೆ ಉತ್ತಮ. ಆದರೆ ಕೊರೊನಾ ಸಮಯದಲ್ಲಿ ಖುದ್ದು ಹಾಜರಾಗುವಂತೆ ಹೇಳಿರುವುದು ಎಷ್ಟು ಸರಿ ಎನ್ನುತ್ತಿದ್ದಾರೆ ಹಲವಾರು ಶಿಕ್ಷಕರು. ಅನೇಕ ಮಂದಿ ದೂರದ ಊರಿನಿಂದ ಬಸ್ ಮೂಲಕ ಬರಬೇಕು. ಬಸ್‌ನಲ್ಲಿ ದೂರದೂರಿಂದ ಬರುವವರಿಗೆ ಕೊರೊನಾ ಭೀತಿ ಕಾಡುತ್ತಿದೆ. ಹೀಗಾಗಿ ಡಯಟ್‌ಗೆ ಬರಲು ಭಯದ ವಾತಾವರಣ ಎದುರಾಗಿದೆ.