ನಭೋ ಮಂಡಲವೆಂದರೆ ಅಚ್ಚರಿಗಳ ಗುಚ್ಛವೆನ್ನಬಹುದು. ರಾತ್ರಿ ಹೊತ್ತು ಆಕಾಶ ನೋಡುವುದೇ ಕಣ್ಣಿಗೆ ಹಬ್ಬ. ಇಂತಹ ವಿಸ್ಮಯಗಳನ್ನು ಕಣ್ತುಂಬಿಸಿಕೊಳ್ಳುವ ಆಸೆ ನಿಮ್ಮಗಿದ್ದರೆ ಪಿಲಿಕುಳದಲ್ಲಿದೆ ಒಂದು ಉತ್ತಮ ಅವಕಾಶ. ದೇಶದಲ್ಲಿ 3ಡಿ ತಾರಾಲಯವನ್ನು ಹೊಂದಿದ ಪ್ರಥಮ ನಗರ ಎಂಬ ಹೆಗ್ಗಳಿಕೆ ಮಂಗಳೂರು ಸಮೀಪದ ಈ ಪಿಲಿಕುಳಕ್ಕಿದೆ.
ನಭೋಮಂಡಲದ ವಿಸ್ಮಯಗಳನ್ನು ವೀಕ್ಷಿಸಲು ಅಪರೂಪದ ತಾರಾಲಯವೊಂದು ನಿರ್ಮಾಣಗೊಂಡಿದೆ. ಇದು ದೇಶದಲ್ಲಿಯೇ ಪ್ರಥಮವಾಗಿರುವ ವಿಶಿಷ್ಟ ಸೌಲಭ್ಯಗಳನ್ನು ಹೊಂದಿರುವ 3ಡಿ ತಾರಾಲಯವಾಗಿದೆ. ಸ್ವಾಮಿ ವಿವೇಕಾನಂದ ತಾರಾಲಯವು 18 ಮೀಟರ್ ವ್ಯಾಸದಷ್ಟು ದೊಡ್ಡದಿದ್ದು, ಆಧುನಿಕ ತಂತ್ರಜ್ಞಾನದ ನ್ಯಾನೋಸೀಮ್ ಡೂಮ್ ಅನ್ನು 15 ಡಿಗ್ರಿ ಕೋನದಲ್ಲಿ ಇರಿಸಲಾಗಿದೆ. ಅಪ್ಟೋ- ಮೆಕ್ಯಾನಿಕಲ್ ಮತ್ತು 8ಕೆ ಡಿಜಿಟಲ್ ಪ್ರೊಜೆಕ್ಷನ್ ಸಿಸ್ಟಂಗಳನ್ನು ಅಳವಡಿಸಲಾಗಿದ್ದು, 3ಡಿ ವ್ಯವಸ್ಥೆಯ ಮೂಲಕ ವೀಕ್ಷಕರಿಗೆ ಹೊಸ ಅನುಭವ ನೀಡುತ್ತಿದೆ.
ಈ ತಾರಾಲಯದಲ್ಲಿ ಸುಮಾರು 170 ಮಂದಿ ಕುಳಿತುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಆನ್ ಲೈನ್ ನಲ್ಲಿ ಟಿಕೆಟ್ ಬುಕಿಂಗ್ ಮಾಡಬಹುದಾಗಿದ್ದು, ಪ್ರಸ್ತುತ ಕನ್ನಡ ಹಾಗು ಆಂಗ್ಲ ಭಾಷೆಯ ವಿಡಿಯೋಗಳನ್ನು ಪ್ರದರ್ಶಿಸಲಾಗುತ್ತಿದೆ. ಟಿಕೆಟ್ ಗೆ 100 ರೂಪಾಯಿ ದರವಿದ್ದರೆ ಮಕ್ಕಳಿಗೆ ವಿಶೇಷ ಪ್ಯಾಕೇಜ್ ಗಳಿವೆ. ರಜಾ ದಿನಗಳಲ್ಲಿ ಭೇಟಿ ನೀಡಲು ಇದೊಂದು ಅದ್ಭುತವಾದ ಸ್ಥಳವೆನ್ನಬಹುದು. ಇದು ಮನರಂಜನೆಯ ಜತೆಗೆ ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ.