ಬೆಂಗಳೂರು: ಶಾಸಕಿ ಸೌಮ್ಯಾ ರೆಡ್ದಿ ವಿರುದ್ಧ ಎಫ್ ಐ ಆರ್ ದಾಖಲು ವಿಚಾರವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಪೊಲೀಸ್ ಇಲಾಖೆ ಬಿಜೆಪಿ ಕೈಗೊಂಬೆಯಾಗಿದೆ. ಠಾಣೆಗೆ ದೂರು ನೀಡಲು ಹೋದರೂ ತೆಗೆದುಕೊಳ್ಳಲು ಸಿದ್ಧರಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಅಂದು ರಾಜಭವನ ಚಲೋ ವೇಳೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೇರಿದಂತೆ ಹಲವರನ್ನು ಬಂಧಿಸಲಾಯಿತು. ಈ ವೇಳೆ ನನ್ನ ಮಗಳು ಸೌಮ್ಯಾ ಲೇಡಿ ಕಾನ್ಸ್ ಟೇಬಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಸೌಮ್ಯಾ ನಾನು ಯಾವುದೇ ಹಲ್ಲೆ ನಡೆಸಿಲ್ಲ ಎಂದಿದ್ದಾಳೆ. ಘಟನೆ ಬಳಿಕ ಮಹಿಳಾ ಮೋರ್ಚಾದವರು ದೂರು ನೀಡಲು ಹೋದರೂ ದೂರು ತೆಗೆದುಕೊಂಡಿಲ್ಲ. ನನ್ನ ಮಗಳು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ ಎಂದರು.
ಅಂದು ಶಾಸಕಿಯರಾದ ಸೌಮ್ಯಾ ರೆಡ್ಡಿ ಹಾಗೂ ಅಂಜಲಿ ನಿಂಬಾಳ್ಕರ್ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಇಬ್ಬರಿಗೂ ಗಾಯಗಳಾಗಿವೆ. ಇಬ್ಬರು ಶಾಸಕಿಯರು ಬಿದ್ದಿದ್ದು ಹೇಗೆ ಈ ಬಗ್ಗೆ ಬಿಜೆಪಿ ನಾಯಕರು ಬಾಯಿಬಿಡುತ್ತಿಲ್ಲ. ಸೌಮ್ಯಾ ಹೋಮ್ ಗಾರ್ಡ್ ಮೇಲೆ ಹಲ್ಲೆ ನಡೆಸಿದ್ದಾಳೆ ಎಂಬ ಆರೋಪ ಸುಳ್ಳು ಎಂದು ಗುಡುಗಿದರು.