ಬೆಂಗಳೂರು: ಸಿಡಿ ಲೇಡಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ಬೆನ್ನಲೇ ಪ್ರತಿಕ್ರಿಯಿಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ ಎಂಬುದು ಇದರಿಂದ ಸ್ಪಷ್ಟ. ಸಾಕಷ್ಟು ಪ್ಲಾನ್ ಮಾಡಿ ನನ್ನನ್ನು ಸಿಲುಕಿಸುವ ತಂತ್ರ ಮಾಡಿದ್ದಾರೆ. ಒಂದಲ್ಲ ಇನ್ನೂ 10 ಸಿಡಿ ಬಂದರೂ ನಾನು ಎದುರಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ದೂರು ಕೊಟ್ಟು ಅರ್ಧ ಗಂಟೆ ಬಳಿಕ ಸಿಡಿ ಬಿಡುಗಡೆಯಾಗುತ್ತದೆ. ಆದರೂ ಯುವತಿ ಸುಳಿವಿಲ್ಲ. ಕೆಲ ದಿನಗಳ ನಂತರ ಯುವತಿ ವಿಡಿಯೋ ಹೇಳಿಕೆ ನೀಡುತ್ತಾಳೆ. ಈಗ ಮತ್ತೊಂದು ವಿಡಿಯೋ ಹೇಳಿಕೆ ನೀಡಿದ್ದಾಳೆ. ಇದನ್ನು ಗಮನಿಸಿದರೆ ಆಕೆ ಯಾರದೋ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾಳೆ. ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಅಡಗಿದೆ ಎಂದು ಹೇಳಿದರು.
ಯುವತಿಯಿಂದ ಯಾವುದೇ ಸಿಡಿ ಬಂದಿಲ್ಲ ಎಂದ ಎಸ್ಐಟಿ ಮುಖ್ಯಸ್ಥ
ನಾನು ಯಾವುದೇ ತಪ್ಪು ಮಾಡಿಲ್ಲ. ಈ ಷಡ್ಯಂತ್ರದ ಹಿಂದೆ ಇರುವವರನ್ನು ಜೈಲಿಗೆ ಕಳುಹಿಸದೇ ಬಿಡಲ್ಲ. ನಾನು ಆರೋಪ ಮುಕ್ತನಾಗಿ ಹೊರಗೆ ಬರುತ್ತೇನೆ ಎಂಬ ವಿಶ್ವಾಸವಿದೆ ಎಂದರು.
ಇದೇ ವೇಳೆ ನನ್ನ ಬಳಿಯೂ ಮಹತ್ವದ ಎವಿಡೆನ್ಸ್ ಗಳಿವೆ. ಅದನ್ನು ಬಿಡುಗಡೆ ಮಾಡಿದರೆ ಎಲ್ಲರೂ ಶಾಕ್ ಆಗುತ್ತೀರಿ. ಸಂದರ್ಭ ಬಂದಾಗ ಅದನ್ನು ಹೊರತರುತ್ತೇನೆ ಎಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.