ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಒಬ್ಬಂಟಿಯಾಗಿಸುವ ಮೂಲಕ ಆ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನ ನಡೆಯುತ್ತಿದೆಯಾ ಎಂಬ ಪ್ರಶ್ನೆ ಈಗ ರಾಜ್ಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಈ ಎಲ್ಲದರ ಹಿಂದೆ ಬಿಜೆಪಿ ಹೈಕಮಾಂಡ್ ಇದೆಯಾ ಎಂಬ ಅನುಮಾನ ಮೂಡಿದೆ.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ ಒಂದಷ್ಟು ಮಂದಿ ಆಪ್ತ ಶಾಸಕರುಗಳನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಇರಾದೆ ಹೊಂದಿದ್ದರೂ ಅದಕ್ಕೆ ಹೈಕಮಾಂಡ್ ಒಪ್ಪಿಗೆ ನೀಡಿರಲಿಲ್ಲ. ಆ ಬಳಿಕ ಸಂಪುಟ ವಿಸ್ತರಣೆಗೆ ಸತಾಯಿಸಿ ಒಪ್ಪಿಗೆ ನೀಡಲಾಯಿತಾದರೂ ಯಾರು ಮಂತ್ರಿಗಳಾಗಬೇಕೆಂಬುದನ್ನು ಹೈಕಮಾಂಡ್ ನಿರ್ಧರಿಸಿತು. ಯಡಿಯೂರಪ್ಪನವರಿಗೆ ಇಷ್ಟವಿಲ್ಲದಿದ್ದರೂ ಮೂವರನ್ನು ಉಪ ಮುಖ್ಯಮಂತ್ರಿಗಳನ್ನಾಗಿ ಮಾಡುವ ಮೂಲಕ ಮುಜುಗರಕ್ಕೆ ಈಡು ಮಾಡಲಾಗಿತ್ತು.
ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನಳಿನ್ ಕುಮಾರ್ ಕಟೀಲ್ ಅವರನ್ನು ನೇಮಕ ಮಾಡುವ ಸಂದರ್ಭದಲ್ಲೂ ಬಿಜೆಪಿ ಹೈಕಮಾಂಡ್ ಸೌಜನ್ಯಕ್ಕಾಗಿಯಾದರೂ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಸಮಾಲೋಚನೆ ನಡೆಸಲಿಲ್ಲ. ರಾಜ್ಯ ಹಿಂದೆಂದೂ ಕಾಣದಂತಹ ನೆರೆ ಪರಿಸ್ಥಿತಿ ಎದುರಿಸಿದಾಗಲೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೆರವಿನ ಹಸ್ತ ಚಾಚಲಿಲ್ಲ. ಹೀಗೆ ಹೆಜ್ಜೆಹೆಜ್ಜೆಗೂ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಹೈಕಮಾಂಡ್ ಪರಿಗಣಿಸದೆ ನಿರ್ಲಕ್ಷ್ಯ ಧೋರಣೆ ತೋರಿಸುತ್ತಿದೆ.
ಇದೀಗ ರಾಜ್ಯಸಭಾ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಧೋರಣೆ ಮುಂದುವರೆದಿದ್ದು, ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಕೋರ್ ಕಮಿಟಿ ಕಳುಹಿಸಿದ್ದ ಪಟ್ಟಿಯನ್ನು ಕಡೆಗಣಿಸಿ ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಲಾಗಿದೆ. ಮೂಲಗಳ ಪ್ರಕಾರ ರಾಜ್ಯ ಬಿಜೆಪಿಯ ಕೆಲ ನಾಯಕರಿಗೆ ಈ ಆಯ್ಕೆಯ ಕುರಿತು ಮೊದಲೇ ಮುನ್ಸೂಚನೆ ಇತ್ತೆಂದು ಹೇಳಲಾಗಿದೆ. ತಾವು ಕಳುಹಿಸಿದ್ದ ಪಟ್ಟಿಗೆ ಅನುಮೋದನೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಯಡಿಯೂರಪ್ಪನವರಿಗೆ ಈ ಅನಿರೀಕ್ಷಿತ ಬೆಳವಣಿಗೆ ಶಾಕ್ ನೀಡಿದೆ. ಪರ್ಯಾಯ ನಾಯಕತ್ವ ರೂಪಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎನ್ನಲಾಗುತ್ತಿದ್ದು, ಹೀಗಾಗಿಯೇ ಈ ಎಲ್ಲ ಬೆಳವಣಿಗೆಗಳು ನಡೆಯುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ.