ನನಗೂ ನನ್ನ ಹೆಂಡತಿ ನಡುವೆ ಯಾವುದೇ ರೀತಿಯ ವೈಮನಸ್ಸು ಇಲ್ಲ. ನಮ್ಮ ಮದುವೆಯಾಗಿ 14 ವರ್ಷಗಳಾಗಿವೆ. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ಇತ್ತೀಚೆಗೆ ಮನೆಯಲ್ಲಿ ಏನೇನೋ ನಿಗೂಢ ವಿಷಯಗಳು ನಡೆಯುತ್ತಿದ್ದವು. ಮಧ್ಯರಾತ್ರಿ ಪೂಜೆಗಳು ನಡೆಯುತ್ತಿದ್ದವು ಎಂದು ಚಿತ್ರ ಸಾಹಿತಿ ಕೆ. ಕಲ್ಯಾಣ್ ತಿಳಿಸಿದ್ದಾರೆ.
ದಾಂಪತ್ಯ ಜೀವನದಲ್ಲಿ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ. ಕಲ್ಯಾಣ್, ಕೆಲ ವರ್ಷಗಳಿಂದ ನಾನು ನನ್ನ ಪತ್ನಿ ಹಾಗೂ ಆಕೆಯ ತಂದೆ-ತಾಯಿ ಎಲ್ಲರೂ ಒಂದೇ ಮನೆಯಲ್ಲಿ ವಾಸವಾಗಿದ್ದೆವು. ಕೆಲ ದಿನಗಳಲ್ಲಿ ಗಂಗಾ ಕುಲಕರ್ಣಿ ಎಂಬಾಕೆ ಕೆಲಸಕ್ಕೆ ಬಂದಿದ್ದರು. ನನಗೆ ಇಷ್ಟವಾಗಲಿಲ್ಲವಾದರೂ ನಮ್ಮ ಅತ್ತೆಯ ಕಡೆಯವರೆಂದು ಸುಮ್ಮನಾಗಿದ್ದೆ.
ಬರಬರುತ್ತಾ ನನ್ನ ಪತ್ನಿ ಅಶ್ವಿನಿ ಡಲ್ ಆಗಿ ಇರುತ್ತಿದ್ದಳು. ಏನೆಂದು ವಿಚಾರಿಸಿದಾಗ ಅಷ್ಟಾಗಿ ಮಾತನಾಡುತ್ತಿರಲಿಲ್ಲ. ಇದ್ದಕ್ಕಿದ್ದಂತೆ ಒಂದು ದಿನ ಮಧ್ಯರಾತ್ರಿಯವರೆಗೆ ಮನೆಯಲ್ಲಿ ಪೂಜೆ, ದೇವರ ಮನೆಯಲ್ಲಿ ನಿಂಬೆ ಹಣ್ಣುಗಳನ್ನು ಇಟ್ಟು ಪೂಜಿಸುವುದು. ಹೀಗೆ ವಿಚಿತ್ರ ಪೂಜೆಗಳನ್ನು ಮಾಡಲು ಶುರು ಮಾಡಿದರು. ಈ ಬಗ್ಗೆ ನನ್ನ ಅತ್ತೆಯನ್ನು ಕೇಳಿದಾಗ ಗಂಗಾ ಕುಲಕರ್ಣಿಗೆ ಗೊತ್ತಿರುವ ಓರ್ವ ಪೂಜಾರಿ ಹೇಳಿದ್ದಾರೆ. ಒಳ್ಳೆಯದಾಗಲಿ ಎಂದು ಹೀಗೆ ಪೂಜೆ ಮಾಡುತ್ತಿದ್ದುದಾಗಿ ಹೇಳಿದರು. ಏನೋ ಪೂಜೆ ಮಾಡುತ್ತಿರಬೇಕೆಂದು ಅದಕ್ಕೂ ಸುಮ್ಮನೆ ಇದ್ದೆ ಎಂದು ವಿವರಿಸಿದ್ದಾರೆ.
ಅದಾದ ಬಳಿಕ ಸೆ.5 ರಂದು ನನ್ನ ಪತ್ನಿ ಹಾಗೂ ಆಕೆ ತಂದೆ-ತಾಯಿ ಬೆಳಗಾವಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದರು. ಅಲ್ಲಿಗೆ ಹೋದ ಬಳಿಕ ಪತ್ನಿಯ ಫೋನ್ ಸ್ವಿಚ್ಡ್ ಆಫ್ ಆಗಿದೆ. ನನಗೆ ಯಾವುದೇ ಫೋನ್ ಸಂಪರ್ಕ ಸಿಗಲಿಲ್ಲ. ಇದರಿಂದ ನಾನೇ ಖುದ್ದು ಬೆಳಗಾವಿಗೆ ತೆರಳಿದೆ. ಅಲ್ಲಿಗೆ ಹೋದರೂ ನನಗೆ ನನ್ನ ಪತ್ನಿ ಭೇಟಿಗೆ ಬಿಟ್ಟಿಲ್ಲ ಆದರೂ ಪ್ರಯತ್ನ ಮಾಡಿ ಅವರ ಮನೆಗೆ ಹೋಗಿ ವಿಚಾರಿಸಿದಾಗ ಅಲ್ಲಿ ಏನು ನಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಮೊದಲು ನನ್ನ ಅತ್ತೆಯವರೇ ಮಾತನಾಡಿದರು. ಕೆಲ ಹೊತ್ತಲ್ಲಿ ಗಂಗಾ ಕುಲಕರ್ಣಿ ಜೊತೆ ನನ್ನ ಪತ್ನಿ ಒಂದು ರೂಮಿನಿಂದ ಹೊರ ಬಂದಳು.
ನನ್ನ ಜೊತೆ ಆಕೆ ಮಾತನಾಡಲು ಪ್ರಯತ್ನಿಸಿದರೂ ಗಂಗಾ ಕುಲಕರ್ಣಿ ಬಿಡಲಿಲ್ಲ. ಬಳಿಕ ನಾನೇ ಹೋಗಿ ಮಾತನಾಡಿಸಿದೆ. ಆ ವೇಳೆ ಆಕೆ ಕತ್ತಲ್ಲಿ ಮಾಂಗಲ್ಯ, ಕಾಲಲ್ಲಿ ಕಾಲುಂಗುರ ಇರಲಿಲ್ಲ. ಯಾಕೆ ಮಾಂಗಲ್ಯ, ಕಾಲುಂಗುರ ತೆಗೆದಿದ್ದೀಯ ಎಂದು ಕೇಳಿದ್ದಕ್ಕೆ ಅದೆಲ್ಲ ಇದ್ದರೆ ಮಾತ್ರ ಗಂಡ-ಹೆಂಡತಿನಾ ಎಂದು ಪ್ರಶ್ನಿಸಿದಳು. ಸರಿ ನಿನ್ನ ಮನಸ್ಸಿನಲ್ಲಿ ಇದ್ದರೆ ಸಾಕು ಎಂದೆ. ಅಷ್ಟೊತಿಗೆ ಅತ್ತೆ ಬಂದು ನನ್ನ ಪತ್ನಿಯನ್ನು ರೂಮಿಗೆ ಕರೆದೊಯ್ದು ವಿಚಿತ್ರವಾದ ಕುಂಕುಮ ಹಚ್ಚಿ ಕಳುಹಿಸಿದರು. ಬಳಿಕ ರೂಮಿಂದ ಹೊರ ಬಂದ ನನ್ನ ಪತ್ನಿ ನನ್ನ ಜೊತೆ ವಿಚಿತ್ರವಾಗಿ ಮಾತನಾಡಲು ಆರಂಭಿಸಿದಳು. ನಾನು ಯಾರೆಂದು ಗೊತ್ತಿಲ್ಲ ಎಂಬ ರೀತಿ, ಅಪರಿಚಿತನ ರೀತಿ ವರ್ತಿಸಲು ಆರಂಭಿಸಿದಳು. ಇದು ನನಗೆ ತುಂಬಾ ಶಾಕ್ ಆಯಿತು ಎಂದು ಹೇಳಿದ್ದಾರೆ.