ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾಣಿ ಅವರ ನ್ಯಾಯಾಂಗ ಬಂಧನ ಅವಧಿ ನಾಳೆ ಮುಗಿಯಲಿದ್ದು, ನಾಳೆ ನಟಿಯನ್ನು ವಿಶೆಷ ಕೋರ್ಟ್ ಗೆ ಹಾಜರು ಪಡಿಸಲಾಗುತ್ತಿದೆ.
ಡ್ರಗ್ಸ್ ಪ್ರಕರಣ ಸಂಬಂಧ ನಿನ್ನೆ 1ನೇ ಎಸಿಎಂಎಂ ನ್ಯಾಯಾಲಯ ಸಂಜನಾ ಗಲ್ರಾಣಿ ಅವರನ್ನು 2 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ನಾಳೆ ಸಂಜನಾ ಅವರ ನ್ಯಾಯಾಂಗ ಬಂಧನ ಅವಧಿ ಮುಗಿಯುತ್ತಿರುವ ಹಿನ್ನಲೆಯಲ್ಲಿ ಎನ್.ಡಿ.ಪಿ.ಎಸ್. ವಿಶೇಷ ಕೋರ್ಟ್ ಗೆ ಸಂಜನಾ ಹಾಜರಾಗಲಿದ್ದಾರೆ. ಈ ಹಿನ್ನಲೆಯಲ್ಲಿ ವಿಶೇಷ ಕೋರ್ಟ್ ನಲ್ಲಿ ನಟಿ ಸಂಜನಾಗೆ ಜಾಮೀನು ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದೇ ವೇಳೆ ಪ್ರಕರಣದ ಇನ್ನೋರ್ವ ಆರೋಪಿ ನಟಿ ರಾಗಿಣಿ ದ್ವಿವೇದಿ ಅವರ ನ್ಯಾಯಾಂಗ ಬಂಧನ ಅವಧಿ ಕೂಡ ಶನಿವಾರ ಮುಗಿಯಲಿದ್ದು, ಸೆ.19ರಂದು ರಾಗಿಣಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ. ಇನ್ನು ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿ ಇಬ್ಬರೂ ಜೈಲಿನಲ್ಲಿ ಒಂದೇ ಕೊಠಡಿಯಲ್ಲಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಟಿ ರಾಗಿಣಿ ಜೈಲಿನ ಬ್ಯಾರಕ್ ನಿಂದಲೂ ಹೊರಬರುತ್ತಿಲ್ಲ ಎನ್ನಲಾಗಿದೆ.