ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ವಿರುದ್ಧ ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದ್ದು, ಅವರ ವಿರುದ್ಧ ಸ್ವಯಂ ಪ್ರೇರಿತ ಕೇಸ್ ದಾಖಲಿಸಿರುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಟಿ ರಾಗಿಣಿ ವಿರುದ್ಧ ಸುಮೊಟೋ ಕೇಸ್ ದಾಖಲಿಸಿ ಸರ್ಚ್ ವಾರೆಂಟ್ ಪಡೆದು ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಏನೂ ಸಿಕ್ಕಿಲ್ಲ. ಅವರ ಹಾರ್ಡ್ ಡಿಸ್ಕ್, ಲ್ಯಾಪ್ ಟಾಪ್, ಕಂಪ್ಯೂಟರ್ ಗಳನ್ನು ಸೀಜ್ ಮಾಡಲಾಗಿದೆ ಎಂದರು.
ಸ್ಯಾಂಡಲ್ ವುಡ್ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಸಧ್ಯಕ್ಕೆ ಇಬ್ಬರನ್ನು ಬಂಧಿಸಲಾಗಿದೆ. ಓರ್ವ ಆರ್.ಟಿ.ಒ. ಕಚೇರಿ ಸಿಬ್ಬಂದಿಯಾಗಿದ್ದ ರವಿಶಂಕರ್ ಹಾಗೂ ಉದ್ಯಮಿ ರಾಹುಲ್ ಎಂಬುವವರನ್ನು ಬಂಧಿಸಿದ್ದು, ಇಬ್ಬರೂ ಮಾಫಿಯಾದಲ್ಲಿರುವ ಹಲವರ ಹೆಸರನ್ನು ಹೇಳಿದ್ದಾರೆ. ರವಿಶಂಕರ್ ನೀಡಿರುವ ಮಾಹಿತಿ ಆಧರಿಸಿ ನಟಿ ರಾಗಿಣಿ ವಿರುದ್ಧ ಸುಮೋಟೋ ಕೇಸ್ ದಾಖಲಿಸಿ ಅವರ ಮನೆ ಮೇಲೆ ದಾಳಿ ನಡೆಸಿದ್ದೆವು ಎಂದು ತಿಳಿಸಿದರು.
ಆರೋಪಿಗಳಿಬ್ಬರೂ ಡ್ರಗ್ಸ್ ಸೇವಿಸುವುದರ ಜತೆಗೆ ಮಾರಾಟ ಮಾಡುತ್ತಿದ್ದರು. ರಾಹುಲ್ ವಿದೇಶಗಳಿಂದ ಡ್ರಗ್ಸ್ ತಂದು ಹಲವು ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ. ಇಬ್ಬರ ಮೊಬೈಲ್ ನಿಂದ ಹಲವು ಮಾಹಿತಿ ಸಿಕ್ಕಿದೆ. ಪ್ರಕರಣ ಸಂಬಂಧ ಸಾಕಷ್ಟು ಜನರನ್ನು ತನಿಖೆಗೆ ಒಳಪಡಿಸಲಾಗಿದೆ. ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಹಲವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿದೆ ಎಂದು ಹೇಳಿದರು.