ಬೆಂಗಳೂರು: ಡ್ರಗ್ಸ್ ನಂಟು ಪ್ರಕರಣ ಸಂಬಂಧ ಈಗಾಗಲೇ 1ನೇ ಎಸಿಎಂಎಂ ನ್ಯಾಯಾಲಯ ನಟಿ ರಾಗಿಣಿಯವರನ್ನು 5 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ವಹಿಸಿ ಆದೇಶ ಹೊರಡಿಸಿದೆ. ವಿಚಾರಣೆ ವೇಳೆ ಸಿಸಿಬಿ ಪರ ವಕೀಲರು ಕೋರ್ಟ್ ಗೆ 10 ದಿನ ಕಸ್ಟಡಿಗೆ ನೀಡುವಂತೆ ಕೋರಿದ್ದರು.
ನಟಿ ರಾಗಿಣಿಗೆ ಡ್ರಗ್ಸ್ ಜಾಲದ ನಂಟಿಗೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ರಾಗಿಣಿ ಹೈದರಾಬಾದ್, ಮುಂಬೈ, ಚೆನ್ನೈ ಹೀಗೆ ಹಲವು ಕಡೆಗಳಲ್ಲಿ ಪಾರ್ಟಿಗಳಲ್ಲಿ ಭಾಗಿಯಾಗಿದ್ದಾರೆ. ಸಿಸಿಬಿ ತನಿಖೆಗೆ ಸರಿಯಾಗಿ ಸಹಕರಿಸಿಲ್ಲ. ಹೀಗಾಗಿ ಅವರನ್ನು ಇನ್ನಷ್ಟು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಸಿಸಿಬಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ನಟಿ ರಾಗಿಣಿಯವರನ್ನು ನಾಲ್ಕು ದಿನಗಳಿಂದ ವಿಚಾರಣೆ ನಡೆಸುತ್ತಿದ್ದರೂ ಅವರು ನಮ್ಮ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುತ್ತಿಲ್ಲ. ಡ್ರಗ್ಸ್ ಲಿಂಕ್ ಬಗ್ಗೆ ಅವರ ಮೊಬೈಲ್ ನಲ್ಲೂ ಮಾಹಿತಿ ಲಭ್ಯವಾಗಿದೆ. ರಾಗಿಣಿ ಹಲವರಿಗೆ ಕರೆ ಮಾಡಿದ್ದಾರೆ, ಮೆಸೇಜ್ ಮಾಡಿದ್ದಾರೆ. ಬಳಿಕ ಮೆಸೇಜ್ ಡಿಲಿಟ್ ಮಾಡಿದ್ದಾರೆ. ಹೀಗಾಗಿ ಅವರನ್ನು 10 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ವಹಿಸುವಂತೆ ಸಿಸಿಬಿ ಪರ ವಕೀಲರು ಕೋರಿದ್ದರು. ಆದರೆ ನ್ಯಾಯಾಧೀಶ ಜಗದೀಶ್ ಅವರು ನಟಿ ರಾಗಿಣಿ ಅವರನ್ನು 10 ದಿನಗಳ ಬದಲಾಗಿ 5 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ವಹಿಸಿ ಆದೇಶ ನೀಡಿದ್ದಾರೆ.