ತುಪ್ಪ ಬೇಕಾ….ತುಪ್ಪ…..ಎಂಬ ಹಾಡಿಗೆ ಸೊಂಟ ಬಳುಕಿಸಿದ್ದ ನಟಿ ರಾಗಿಣಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಡ್ರಗ್ಸ್ ಜಾಲದ ಕಿಂಗ್ ಪಿನ್ ಅನಿಕಾ ಬಂಧನದ ನಂತರ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ರಾಗಿಣಿ ಆತ್ಮೀಯ ಸ್ನೇಹಿತ ರವಿಶಂಕರ್ ಎಂಬಾತನನ್ನು ಬಂಧಿಸಿದ್ದಾರೆ.
ತನ್ನ ತಂದೆ ಸಾವಿನ ನಂತರ ಅನುಕಂಪದ ಆಧಾರದ ಮೇಲೆ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಪ್ರಥಮ ದರ್ಜೆ ಗುಮಾಸ್ತನ ಹುದ್ದೆ ಪಡೆದಿದ್ದ ರವಿಶಂಕರ್ ಐಷಾರಾಮಿ ಜೀವನ ನಡೆಸುತ್ತಿದ್ದನೆನ್ನಲಾಗಿದ್ದು, ರಾಗಿಣಿ ಜೊತೆಗೆ ಅತ್ಯಂತ ಆತ್ಮೀಯ ಸಂಬಂಧ ಹೊಂದಿದ್ದ ಎಂದು ಹೇಳಲಾಗಿದೆ.
ಈ ಹಿಂದೆ ರಾಗಿಣಿ ವಿಚಾರಕ್ಕೆ ಸಂಬಂಧಿಸಿದಂತೆ ಆಕೆಯ ಮಾಜಿ ಗೆಳೆಯ ಹಾಗೂ ರವಿಶಂಕರ್ ನಡುವೆ ಹೋಟೆಲ್ ಒಂದರಲ್ಲಿ ಫೈಟ್ ನಡೆದಿದ್ದು, ಈ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿತ್ತು. ರಾಗಿಣಿ, ರವಿಶಂಕರ್ ಜೊತೆ ಹೊದಿದ್ದ ಆತ್ಮೀಯತೆಯಿಂದಲೇ ಸಂಕಷ್ಟ ಎದುರಿಸುವಂತಾಗಿದ್ದು, ಡ್ರಗ್ಸ್ ಪ್ರಕರಣದಲ್ಲಿ ಆಕೆ ಬಂಧನವಾದರೂ ಅಚ್ಚರಿಯಿಲ್ಲವೆಂದು ಹೇಳಲಾಗಿದೆ.
ತನಗಿದ್ದ ಲಿಂಕ್ ಮೇಲೆ ಡ್ರಗ್ಸ್ ಪಡೆಯುತ್ತಿದ್ದ ರವಿಶಂಕರ್ ಇದನ್ನು ಕೆಲ ನಟ-ನಟಿಯರು, ಉದ್ಯಮಿಗಳು ಹಾಗೂ ರಾಜಕಾರಣಿಗಳ ಮಕ್ಕಳಿಗೆ ಪೂರೈಸುತ್ತಿದ್ದನೆನ್ನಲಾಗಿದೆ. ಈತನ ಕೃತ್ಯದ ಅರಿವು ನಟಿ ರಾಗಿಣಿಗೂ ಇತ್ತೆನ್ನಲಾಗಿದ್ದು, ಅವರೂ ಸಹ ಭಾಗಿಯಾಗಿದ್ದರೆ ಎಂಬುದು ಸಿಸಿಬಿ ತನಿಖೆ ನಂತರ ಬಯಲಾಗಲಿದೆ.