ಹಿಂದೂ ಸಂಪ್ರದಾಯದಲ್ಲಿ ಗೋವಿಗೆ ಮಹತ್ವದ ಸ್ಥಾನವಿದೆ. ಯಾವುದೇ ಶುಭ ಕಾರ್ಯದಲ್ಲೂ ಗೋವಿನ ಪೂಜೆ ಇಲ್ಲದೆ ಇರೋದಿಲ್ಲ. ಮುಕ್ಕೋಟಿ ದೇವತೆಗಳೇ ಗೋವಿನಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆ ಹಿಂದೂಗಳದ್ದು. ಹೀಗಾಗಿಯೇ ವಿಶೇಷ ಗೌರವ ಹಾಗೂ ಭಕ್ತಿ ಗೋವುಗಳ ಮೇಲಿದೆ. ಇದೀಗ ಗೋಮಾತೆಯ ರಕ್ಷಣೆಗೆ ಟಿಟಿಡಿ ಹೊಸ ಯೋಜನೆಯೊಂದನ್ನು ರೂಪಿಸಿದೆ.
ಹೌದು, ದೇವಸ್ಥಾನಗಳಿಗೆ ಹಸು-ಕರು ತಲುಪಿಸುವಂತಹ ಕಾರ್ಯಕ್ಕೆ ಮಲ್ಲೇಶ್ವರಂನ ತಿರುಪತಿ ತಿರುಮಲ ದೇವಸ್ಥಾನಂ ಕೈ ಹಾಕಿದೆ. ಗುಡಿಗೊಂದು ಗೋವು ಎಂಬ ಯೋಜನೆಯಡಿ ಈ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ನಗರದ ಇಸ್ಕಾನ್ ಟೆಂಪಲ್, ಯದುಗಿರಿ ಯತಿರಾಜ ಮಠ, ತಿರುಮಲ ಗಿರಿ ಜೆ.ಪಿ. ನಗರ, ಘಾಟಿ ಸುಬ್ರಹ್ಮಣ್ಮ, ಚಿಂತಾಮಣಿ ಬಳಿಯ ಕೈವಾರದ ಯೋಗಿ ನಾರಾಯಣ ಮಠಗಳಿಗೆ ಗೋವುಗಳನ್ನು ತಲುಪಿಸಿದೆ.
ಇನ್ನು ಈ ಗುಡಿಗೊಂದು ಗೋವು ಯೋಜನೆ ಟಿಟಿಡಿಯ ಸ್ಥಾನಿಕ ಸಲಹಾ ಸಮಿತಿ ಅಧ್ಯಕ್ಷರಾದ ಮಾಜಿ ಸಂಸದ ಕುಪೇಂದ್ರ ರೆಡ್ಡಿ ಹಾಗೂ ಟಿಟಿಡಿ ಬೋರ್ಡ್ ತಿರುಪತಿಯ ಅಧ್ಯಕ್ಷರಾದ ವೈ.ವಿ. ಸುಬ್ಬಾರೆಡ್ಡಿಯವರ ನೇತೃತ್ವದಲ್ಲಿ ನಡೆಯುತ್ತಿದೆ. ಮಲ್ಲೇಶ್ವರಂನ ಕಾಡುಮಲ್ಲೇಶ್ವರ ದೇವಸ್ಥಾನ ಸೇರಿದಂತೆ ಹಲವು ದೇವಾಲಯದ ಆಡಳಿತ ಮಂಡಳಿಗಳು ಹಸು ಬೇಕೆಂದು ಬೇಡಿಕೆ ಸಲ್ಲಿಸಲಾಗಿದ್ದು ಆದಷ್ಟು ಬೇಗ ಬೇಡಿಕೆ ಇಟ್ಟ ದೇವಸ್ಥಾನಗಳಿಗೆ ಹಸು ತಲುಪಿಸಲಾಗುತ್ತದೆ ಎನ್ನಲಾಗಿದೆ. ಇನ್ನು ಹಾಲು ಕರೆಯುವ ಹಸು ಇದ್ದರೆ ಅದರ ಹಾಲನ್ನು ದೇವರ ಅಭಿಷೇಕಕ್ಕೆ ಬಳಸಲಾಗುತ್ತದೆಯಂತೆ.