ತುಮಕೂರು: ಉಪಚುನಾವಣಾ ಮಾತಿನ ಸಮರ ತಾರಕಕ್ಕೇರಿದ್ದು, ಬಿಜೆಪಿ ನಾಯಕರು ಹಣ ಹಂಚಿಕೆ ಮಾಡುತ್ತಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಚಿವ ಆರ್. ಅಶೋಕ್, ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಯ್ತು ಎಂದು ಲೇವಡಿ ಮಾಡಿದ್ದಾರೆ.
ಉಪಚುನಾವಣೆ ಹಿನ್ನೆಲೆಯಲ್ಲಿ ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಪರ ಮತಯಾಚನೆ ಮಾಡಿದ ಆರ್. ಅಶೋಕ್, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಣ ಹಂಚಿಕೆ ಮಾಡಿದ್ದರು. ಡಿ.ಕೆ.ಶಿ.ಗೆ ಆ ವಿಷಯ ನೆನಪಾಗಿರಬೇಕು. ಹಾಗಾಗಿ ಬಿಜೆಪಿ ವಿರುದ್ಧ ಹಣ ಹಂಚಿಕೆ ಆರೋಪ ಮಾಡುತ್ತಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರಿಗೂ ಕೂಡ ಹಣ ಹಂಚಿಕೆ ಅನುಭವವಿರಬೇಕು. ಅದಕ್ಕೆ ಇಂತಹ ಆರೋಪ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಹಣ ಹಂಚಿ ಗೆಲ್ಲಬೇಕಾದ ಹೀನಾಯ ಸ್ಥಿತಿ ಬಿಜೆಪಿಗೆ ಬಂದಿಲ್ಲ. ಸೋಲುವ ಭಯದಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಮುದಿ ಎತ್ತು ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ವಯಸ್ಸು ಮುಖ್ಯವಲ್ಲ, ಹೇಗೆ ಕೆಲಸ ಮಾಡುತ್ತಾರೆ ಎಂಬುದು ಮುಖ್ಯ. ಕಾಂಗ್ರೆಸ್-ಜೆಡಿಎಸ್ ನವರು 20 ವರ್ಷಗಳಿಂದ ಭರವಸೆಗಳನ್ನು ಕೊಡುತ್ತಲೇ ಇದ್ದಾರೆ. ಈವರೆಗೂ ಜನರಿಗೆ ನೀಡಿದ ಒಂದೇ ಒಂದು ಭರವಸೆ ಈಡೇರಿಸಿಲ್ಲ ಎಂದರು.