ಬೆಂಗಳೂರು: ಆರ್.ಆರ್.ನಗರ ಉಪಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜಕೀಯ ನಾಯಕರ ಮಾತಿನ ಸಮರಕ್ಕೆ ಕಾರಣವಾಗಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಯಾವತ್ತಿದ್ದರೂ ಬಿಜೆಪಿಗೆ ಮುಳ್ಳು. ಮುಂದಿನ ದಿನಗಳಲ್ಲಿ ಬಿಜೆಪಿಗೆ ಅನುಭವಕ್ಕೆ ಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ನಾವು ಯಾವುದೇ ಆಮಿಷಗಳನ್ನು ಒಡ್ಡಿ ಮತ ಕೇಳುತ್ತಿಲ್ಲ. ವಿಶ್ವಾಸದಿಂದ ಕೇಳುತ್ತಿದ್ದೇವೆ. ಆದರೆ ಬಿಜೆಪಿಯವರು ಆರ್.ಆರ್. ನಗರ ಹಾಗೂ ಶಿರಾ ಎರಡೂ ಕ್ಷೇತ್ರಗಳಲ್ಲೂ ಕಂತೆ ಕಂತೆ ಹಣ ಹಂಚುತ್ತಿದ್ದಾರೆ. ಅವರ ಹಣ ಹಂಚಿಕೆ ಬಗ್ಗೆ ನಮಗೆ ದಾಖಲೆಗಳು ಲಭ್ಯವಾಗಿವೆ. ಶಿರಾದಲ್ಲಿ ಮನೆಗಳಿಗೆ ಸ್ಟಿಕ್ಕರ್ ಹಾಕಿ ಹಣ ಹಂಚಿದ್ದಾರೆ ಎಂದು ಆರೋಪಿಸಿದರು.
ಮುನಿರತ್ನ ಯಾವತ್ತಿದ್ದರೂ ಬಿಜೆಪಿಗೆ ಮುಳ್ಳು. ಅದು ಬಿಜೆಪಿ ನಾಯಕರಿಗೆ ಶೀಘ್ರದಲ್ಲೇ ಅರ್ಥವಾಗಲಿದೆ. ನಮ್ಮಲ್ಲಿದ್ದು ಹೋದವರ ಬಗ್ಗೆ ನಮಗೆ ಚೆನ್ನಾಗಿ ಗೊತ್ತು. ಮುನಿರತ್ನ ತಾನು ಹಣ ಪಡೆದಿಲ್ಲ. ಕಾಂಗ್ರೆಸ್ ನವರು ಆಣೆ-ಪ್ರಮಾಣ ಮಾಡಲಿ ಎಂದಿದ್ದಾರೆ. ಆಣೆ-ಪ್ರಮಾಣ ಈಗ ಬೇಡ. ನ.3ರ ಬಳಿಕ ಈ ಬಗ್ಗೆ ಮಾತನಾಡುತ್ತೇನೆ ಎಂದರು.
ಇನ್ನು ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿ., ದರ್ಶನ್ ಓರ್ವ ಸಿನಿಮಾ ನಟ, ನನಗೂ ಪರಿಚಯ. ನಾನು ಕರೆದರು ಬಂದು ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ಮಾಡುತ್ತಾರೆ ಎಂದು ಹೇಳಿದರು.