ಅಖಿಲ ಭಾರತ ಬೆಲೆ ಸೂಚ್ಯಂಕವನ್ನು ಆಧರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಪ್ರತಿವರ್ಷ ಜನವರಿ ಮತ್ತು ಜುಲೈನಿಂದ ಪೂರ್ವಾನ್ವಯವಾಗುವಂತೆ ಈವರೆಗೆ ತುಟ್ಟಿಭತ್ಯೆಯನ್ನು ಬಿಡುಗಡೆಗೊಳಿಸುವ ಸೂತ್ರವನ್ನು ಅನುಸರಿಸಿಕೊಂಡು ಬಂದಿದ್ದವು.
ಆದರೆ ಕಳೆದ ವರ್ಷದ ಆರಂಭದಲ್ಲಿ ಮಹಾಮಾರಿಯಾಗಿ ವಕ್ಕರಿಸಿದ ಕೊರೊನಾ ಕಾರಣಕ್ಕೆ ಲಾಕ್ಡೌನ್ ಘೋಷಣೆಯಾದ ಪರಿಣಾಮ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಹೀಗಾಗಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಎರಡು ಕಂತುಗಳ ತುಟ್ಟಿಭತ್ಯೆಯನ್ನು ತಡೆಹಿಡಿದಿತ್ತು. ರಾಜ್ಯ ಸರ್ಕಾರ ಕೂಡ ಇದೇ ಕ್ರಮವನ್ನು ಅನುಸರಿಸಿತ್ತು.
ಇದೀಗ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಂಗಳವಾರದಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ, ಪ್ರಸ್ತುತ ಆರ್ಥಿಕ ಪರಿಸ್ಥಿತಿ ಗಣನೀಯವಾಗಿ ಸುಧಾರಣೆಯಾಗುತ್ತಿರುವ ಕಾರಣ ತಡೆಹಿಡಿಯಲಾಗಿರುವ ಕಂತುಗಳನ್ನು ಮಂಜೂರು ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಹಾಗೂ ರಾಜ್ಯ ಸರ್ಕಾರ ಕೂಡ ತುಟ್ಟಿಭತ್ಯೆ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ.