ಯಡಿಯೂರಪ್ಪನವರ ರಾಜಕೀಯ ಸಲಹೆಗಾರ ಎಂ.ಬಿ ಮರಮಕಲ್ ಅವರ ನೇಮಕ ರದ್ದತಿ ಒಂದು ರೀತಿಯಲ್ಲಿ ವಿವಾದವನ್ನೇ ಸೃಷ್ಟಿ ಮಾಡುತ್ತಾ ಎಂಬ ಅನುಮಾನ ಕಾಡತೊಡಗಿದೆ. ಇದ್ದಕ್ಕಿದ್ದ ಹಾಗೆ ಸಿಎಂ ರಾಜಕೀಯ ಸಲಹೆಗಾರರಾಗಿದ್ದವರನ್ನು ಕೆಳಗಿಳಿಸಿದ್ದು ಯಾಕೆ ಎಂಬ ಪ್ರಶ್ನೆ ಕಾಡುತ್ತಿದೆ. ಈ ರದ್ದತಿ ಹಿಂದೆ ಸಿಎಂ ಪುತ್ರನ ಕೈವಾಡ ಇದೆ ಎಂಬ ಸಂಶಯ ವ್ಯಕ್ತವಾಗುತ್ತಿದೆ.
ಹೌದು, ಪತ್ರಕರ್ತರಾಗಿದ್ದ ಎಂ.ಬಿ. ಮರಮಕಲ್ ಕಳೆದ ಒಂದು ವರ್ಷದಿಂದ ಯಡಿಯೂರಪ್ಪ ರಾಜಕೀಯ ಸಲಹೆಗಾರರಾಗಿ ಮುಂದುವರೆದಿದ್ದರು. ಮೈತ್ರಿ ಸರ್ಕಾರ ಬೀಳಿಸುವಲ್ಲಿ ಇವರ ಪಾತ್ರವೂ ಇದೆ ಎಂದು ಹೇಳಲಾಗಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಇವರನ್ನು ಕೆಳಗಿಳಿಸಿದ್ದು ಯಾಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
2019ರಲ್ಲಿ ಮರಮಕಲ್ ಅವರನ್ನು ಯಡಿಯೂರಪ್ಪನವರ ರಾಜಕೀಯ ಸಲಹೆಗಾರರಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು. ಇದರ ಜೊತೆಗೆ ರಾಜ್ಯ ಸಚಿವ ಶ್ರೇಣಿಯ ಸ್ಥಾನಮಾನ ಸೌಲಭ್ಯ ಕೊಡಲಾಗಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಇದೇ 13 ರಿಂದ ಅನ್ವಯವಾಗುವಂತೆ ಇವರ ನೇಮಕಾತಿಯನ್ನು ರದ್ದು ಮಾಡಿ ಆದೇಶ ಹೊರಡಿಸಿದೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ. ಇವರ ನೇಮಕಾತಿ ರದ್ದತಿ ಹಿಂದೆ ಬಿಎಸ್‌ವೈ ಪುತ್ರನ ಕೈವಾಡ ಇದೆ ಎನ್ನಲಾಗುತ್ತಿದೆ.