ಮಡಿಕೇರಿ: ಅಕ್ಟೋಬರ್ 17ರಂದು ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವ ಜರುಗಲಿದ್ದು, ಆದರೆ ಈ ಬಾರಿ ಭಕ್ತರಿಗೆ ತೀರ್ಥೋದ್ಭವ ಸಂದರ್ಭದಲ್ಲಿ ದೇವಾಲಯಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.
ಈ ಕುರಿತು ಕೊಡಗು ಜಿಲ್ಲಾಧಿಕಾರಿ ಅನೀಸ್ ಕೆ ಜಾಯ್ ಮಾಹಿತಿ ನೀಡಿದ್ದು, ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ತೀರ್ಥೋದ್ಭವ ಸಂದರ್ಭದಲ್ಲಿ ಜನದಟ್ಟಣೆಯಾಗಬಾರದೆಂದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ತೀರ್ಥೋದ್ಭವಕ್ಕೆ ಭಕ್ತರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ತೀರ್ಥೋದ್ಭವದ ಬಳಿಕ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ದೇವಾಲಯಕ್ಕೆ ಬರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಕೊವಿಡ್ ಟೆಸ್ಟ್ ಗೆ ಒಳಗಾಗಿ ನೆಗೆಟಿವ್ ರಿಪೋರ್ಟ್ ತರಬೇಕು. ದೇವಾಲಯದ ಬಳಿ ಯಾವುದೇ ಅಂಗಡಿಗಳನ್ನು ತೆರೆಯಲು ಅವಕಾಶವಿರುವುದಿಲ್ಲ. ತಲಕಾವೇರಿಗೆ ಈಗ ಇರುವ ಬಸ್ ವ್ಯವಸ್ಥೆ ಬಿಟ್ಟರೆ ಯಾವುದೇ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸುವುದಿಲ್ಲ. ಅಲ್ಲದೇ ಅ.17ರಿಂದ 26ವರೆಗೆ ದಸರಾ ಹಿನ್ನೆಲೆಯಲ್ಲಿ ಕೊಡಗಿನ ಎಲ್ಲಾ ಪ್ರವಾಸಿ ತಾಣಗಳನ್ನು ಕೂಡ ಬಂದ್ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.