ಬೆಂಗಳೂರು: ಬೆಡ್ ಬ್ಲಾಕಿಂಗ್ ಹಗರಣದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ದಾಖಲೆಗಳಿಲ್ಲದೇ ಮಾತನಾಡುತ್ತಿದ್ದಾರೆ. ಯಾವುದೇ ದಾಖಲೆಗಳಿಲ್ಲದೇ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಶಾಸಕ ಜಮೀರ್ ಅಹ್ಮದ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಮೀರ್ ಅಹ್ಮದ್, ಬೆಡ್ ಬ್ಲಾಕಿಂಗ್ ಹಗರಣದಲ್ಲಿ ನಿಮ್ಮದೇ ಶಾಸಕ ಸತೀಶ್ ರೆಡ್ಡಿ ಪಿಎ ಶಾಮೀಲಾಗಿದ್ದಾರೆ ಇದಕ್ಕೇನು ಉತ್ತರಿಸುತ್ತೀರಿ ತೇಜಸ್ವಿ ಸೂರ್ಯ? ತಪ್ಪುಗಳಾದಾಗ ನಿಮಗೆ ಕೇವಲ ಮುಸ್ಲಿಂಮರು ಮಾತ್ರ ಕಾಣುತ್ತಾರೆ. ನಿಮ್ಮಲ್ಲಿ ಅದೆಷ್ಟು ವಿಷ ಇಟ್ಟುಕೊಂಡಿದ್ದೀರಿ. ವಾರ್ ರೂಂ ನಲ್ಲಿ ಸುಮಾರು 205 ಜನರು ಕೆಲಸ ಮಾಡುತ್ತಾರೆ. ಆದರೆ ನಿಮಗೆ ಕೇವಲ 17 ಜನ ಮುಸ್ಲಿಂಮರು ಮಾತ್ರ ಕಾಣುತ್ತಾರೆ. ಆದರೆ ಬೆಡ್ ಅಲಾಟ್ ನಲ್ಲಿ ಕೇವಲ ಸೈಯದ್ ಮಾತ್ರ ಇದ್ದಾನೆ. ದಾಖಲೆಗಳೇ ಇಲ್ಲದೇ ನಮ್ಮ ವಿರುದ್ಧ ಆರೋಪಗಳನ್ನು ಮಾಡುತ್ತಿರುವುದು ಎಷ್ಟು ಸರಿ ಎಂದು ಕಿಡಿಕಾರಿದರು.
ನೀವು ಇಂದು 17 ಜನರನ್ನು ಕೆಲಸದಿಂದ ತೆಗೆದುಹಾಕಿರಬಹುದು. ನಾನು ಆ 17 ಜನರಿಗೆ ಕೆಲಸ ಕೊಡುತ್ತೇನೆ. ಇಂದು ನಮ್ಮ ಗ್ರೇಟ್ ಸಂಸದ ತೇಜಸ್ವಿ ಸೂರ್ಯ ಮಾತನಾಡುತ್ತಾರೆ. ಕಳೆದ ವರ್ಷ ಕೊರೊನಾ ಬಂದಾಗ ಸಂಸದರು ಎಲ್ಲಿಗೆ ಹೋಗಿದ್ದರು? ಕಳೆದ ವರ್ಷ ನಮ್ಮವರು 500 ಶವ ಸಂಸ್ಕಾರ ಮಾಡಿದ್ದರು. ಕೊರೊನಾದಿಂದ ಹಿಂದೂ ಗಳು ಮೃತಪಟ್ಟರೂ ಅವರ ಸಂಸ್ಕಾರವನ್ನೂ ಮಾಡಿದ್ದೇವೆ. ಚಾಮರಾಜನಗರದ ದುರಂತ ಸಂಭವಿಸುತ್ತಿದ್ದಂತೆ ಆ ಪ್ರಕರಣ ಡೈವರ್ಟ್ ಮಾಡಲೆಂದು ಈಗ ಬೆಡ್ ಹಗರಣ ಎಂಬ ನಾಟಕವಾದುತ್ತಿದ್ದೀರಿ. ಇಂತಹ ಆರೋಪಗಳನ್ನು ನಾವು ಎಷ್ಟೆಂದು ಸಹಿಸಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.