ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಶದಲ್ಲಿರುವ ನಟಿ ಸಂಜನಾ ಗಲ್ರಾಣಿ, ಆರಂಭದಿಂದಲೂ ತನಿಖಾಧಿಕಾರಿಗಳಿಗೆ ಅಸಹಕಾರ ತೋರುತ್ತಿದ್ದಾರೆಂದು ಹೇಳಲಾಗಿದ್ದು, ಪ್ರತಿಯೊಂದು ಪ್ರಶ್ನೆಗೂ ನನಗೆ ಗೊತ್ತಿಲ್ಲ ಅಥವಾ ನೆನಪಿಲ್ಲ ಎಂದು ಹೇಳುತ್ತಿದ್ದರೆನ್ನಲಾಗಿದೆ.
ಸಂಜನಾ ಹಾಗೂ ರಾಗಿಣಿಯ ಸಿಸಿಬಿ ಕಸ್ಟಡಿ ಇಂದು ಅಂತ್ಯಗೊಳ್ಳಲಿದ್ದು, ನ್ಯಾಯಾಲಯದ ಮುಂದೆ ಅವರನ್ನು ಹಾಜರುಪಡಿಸಲಾಗುತ್ತದೆ. ಹೀಗಾಗಿ ಇಬ್ಬರು ನಟಿಮಣಿಯರಿಗೆ ಜಾಮೀನು ಸಿಗುತ್ತಾ ಅಥವಾ ಪರಪ್ಪನ ಅಗ್ರಹಾರ ಪಾಲಾಗುತ್ತಾರಾ ಇಲ್ಲವೇ ಮತ್ತೆ ಸಿಸಿಬಿ ಕಸ್ಟಡಿಗೆ ಒಳಪಡುತ್ತಾರಾ ಎಂಬ ಕುತೂಹಲ ಮೂಡಿದೆ.
ಆರಂಭದಿಂದಲೂ ತನಗೇನೂ ಗೊತ್ತಿಲ್ಲ ಎಂದು ಹೇಳುತ್ತಿದ್ದ ಸಂಜನಾ ಮುಂದೆ ತನಿಖಾಧಿಕಾರಿಗಳು ಕಾಲ್ ಡಿಟೇಲ್ಸ್ ಇಟ್ಟಾಗ ತಡಬಡಾಯಿಸಿ ಹೋದ್ರು ಎಂದು ಹೇಳಲಾಗಿದೆ. ಡ್ರಗ್ಸ್ ಪ್ರಕರಣ ಬೆಳಕಿಗೆ ಬಂದ ಬಳಿಕ ಪ್ರಮುಖ ಆರೋಪಿ ಶೇಖ್ ಫಾಜಿಲ್ ಗೆ ಸಂಜನಾ ಕರೆಮಾಡಿ ಮಾತನಾಡಿದ್ದರೆನ್ನಲಾಗಿದ್ದು, ಇದರ ದಾಖಲೆಯನ್ನು ಮುಂದಿಟ್ಟ ವೇಳೆ ತನಗೆ ಆತನ ಸಂಪರ್ಕವಿದ್ದುದಾಗಿ ಸಂಜನಾ ಒಪ್ಪಿಕೊಂಡರೆನ್ನಲಾಗಿದೆ.