ಬೀಚ್ ಬಗ್ಗೆ ಕುತೂಹಲ ಹೊಂದಿರುವವರು ಮಂಗಳೂರಿನ ತಣ್ಣೀರುಬಾವಿಯ ಸೊಬಗನ್ನು ಒಮ್ಮೆ ಕಣ್ತುಂಬಿಕೊಳ್ಳಲೇ ಬೇಕು. ಏನದರ ವೈಶಿಷ್ಟ್ಯ ಎಂದಿರಾ?
ಇದು ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದು. ಕಡಲತೀರದ ಜೊತೆಗೆ, ಸುಲ್ತಾನ್ ಬತ್ತೇರಿ, ತಣ್ಣೀರುಬಾವಿ ಟ್ರೀ ಪಾರ್ಕ್ ಮತ್ತು ಸಾಗರ ವಸ್ತು ಸಂಗ್ರಹಾಲಯವೂ ಇಲ್ಲಿಗೆ ಬರುವ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.
ಅರಣ್ಯ ಇಲಾಖೆಯ ಮುಂದಾಳತ್ವದಲ್ಲಿ ನಿರ್ಮಾಣವಾದ ಟ್ರೀ ಪಾರ್ಕ್ 15 ಹೆಕ್ಟೇರ್ ಪ್ರದೇಶದಲ್ಲಿದೆ. ಈ ಟ್ರೀ ಪಾರ್ಕ್ ನಲ್ಲಿ ಪಶ್ಚಿಮ ಘಟ್ಟದಲ್ಲಿ ಕಂಡು ಬರುವ ಕೆಲವು ನಿರ್ದಿಷ್ಟ ಪ್ರಭೇದದ ಮರಗಳಿವೆ. ಇದು ಗಿಡಮೂಲಿಕೆ ಮತ್ತು ವೈದ್ಯಕೀಯ ಗುಣವುಳ್ಳ ಮರ/ ಸಸ್ಯಗಳನ್ನು ಒಳಗೊಂಡಿದೆ. ಪ್ರಕೃತಿಯ ಬಗ್ಗೆ ತಿಳಿಯಲು ಇದು ಪ್ರಶಸ್ತವಾದ ತಾಣವಾಗಿದೆ.
ಸ್ಥಳೀಯ ಪ್ರದೇಶದ ಸಂಸ್ಕೃತಿಯನ್ನು ಚಿತ್ರಿಸುವ ವಿವಿಧ ಶಿಲ್ಪಗಳನ್ನು ಹೊಂದಿದೆ, ತುಳುನಾಡು ಯಕ್ಷಗಾನ ಮತ್ತು ಭೂತ ಕೋಲಗಳಂತಹ ಶಿಲ್ಪಗಳು ಇಲ್ಲಿನ ಆಕರ್ಷಣೆಗಳಾಗಿವೆ. ಬೆಳಗ್ಗೆ 10ರಿಂದ ಸಂಜೆ 6 ಗಂಟೆಯ ವರೆಗೆ ತೆರೆದಿರುತ್ತದೆ. ಸಮಯ ಸಿಕ್ಕರೆ ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಂದು ಇಲ್ಲಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ.