ರಾಜ್ಯದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿರುವ ನಡುವೆ ಲಾಕ್ ಡೌನ್ ಕಾರಣಕ್ಕೆ ಮುಂದೂಡಿಕೆಯಾಗಿದ್ದ 10ನೇ ತರಗತಿ ಪರೀಕ್ಷೆಗಳು ನಡೆಯುತ್ತಿವೆ. ಇದರ ಮಧ್ಯೆ ವಿದ್ಯಾರ್ಥಿಯೊಬ್ಬ ತನ್ನ ತಂದೆ ಸಾವನ್ನಪ್ಪಿದ ನೋವಿನಲ್ಲೂ ಪರೀಕ್ಷೆ ಬರೆದಿದ್ದಾನೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಮೇದಾರ ಬೀದಿಯ ಮಹಮದ್ ಖಲಂದರ್ ಪರೀಕ್ಷೆ ಬರೆದ ವಿದ್ಯಾರ್ಥಿಯಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಈತನ ತಂದೆ ಸಮೀವುಲ್ಲಾ ಶನಿವಾರ ಬೆಳಗಿನ ಜಾವ ನಿಧನರಾಗಿದ್ದರು.
ಇದರಿಂದ ಆಘಾತಗೊಂಡಿದ್ದ ಮಹಮ್ಮದ್ ಖಲಂದರ್ ದುಃಖದ ಮಡುವಿನಲ್ಲಿದ್ದ ವೇಳೆ ನಿಜಲಿಂಗಪ್ಪ ಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ್ ಹಾಗೂ ವಿಇಒ ಜಯಪ್ಪ ಆತನ ಮನೆಗೆ ಭೇಟಿ ನೀಡಿ ಪರೀಕ್ಷೆ ಬರೆಯುವಂತೆ ಆತ್ಮವಿಶ್ವಾಸ ತುಂಬಿ ಪ್ರೋತ್ಸಾಹಿಸಿದ್ದಾರೆ.
ಅಲ್ಲದೆ ವಿದ್ಯಾರ್ಥಿಗೆ ಎಳನೀರು, ಉಪಹಾರ ನೀಡಿ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪರೀಕ್ಷೆ ಬರೆಸಿದ್ದು, ಆ ಬಳಿಕ ಬಂದ ವಿದ್ಯಾರ್ಥಿ, ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾನೆ.