ಬೆಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ಶಾಸಕರ ಮಕ್ಕಳೇ ಬಾಗಿಯಾಗಿದ್ದಾರೆ. ಈ ಹಿಂದೆ ಶಾಸಕರೊಬ್ಬರು ವಿಧಾನಸೌಧದಲ್ಲಿ ಕಣ್ಣೀರಿಟ್ಟಿದ್ದರು. ಅಂದು ನಾನೂ ಕೂಡ ಅಲ್ಲಿದ್ದೆ. ಅಂದೇ ನಾನು ಡ್ರಗ್ಸ್ ಮಾಫಿಯಾ ಮಟ್ಟಹಾಕುವಂತೆ ಸರ್ಕಾರವನ್ನು ಆಗ್ರಹಿಸಿದ್ದೆ ಎಂದು ಮಾಜಿ ಸಚಿವ ಹೆಚ್ ಕೆ ಪಾಟೀಲ್ ತಿಳಿಸಿದ್ದಾರೆ.
ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕೇವಲ ಚಿತ್ರರಂಗ ಮಾತ್ರವಲ್ಲ ಬೇರೆ ಬೇರೆ ಕ್ಷೇತ್ರಗಳಲ್ಲೂ ಈ ಮಾಫಿಯಾ ಇದೆ. ಸಧ್ಯ ಚಿತ್ರರಂಗದವರ ಬಗ್ಗೆ ಮಾತ್ರ ಮಾಹಿತಿ ಹೊರಬರುತ್ತಿದೆ. ಉಳಿದ ಕ್ಷೇತ್ರದಲ್ಲಿನ ಡ್ರಗ್ಸ್ ಜಾಲದ ಬಗ್ಗೆಯೂ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ಶಾಲಾ-ಕಾಲೇಜು, ಪಬ್, ಬಾರ್, ಹೋಟೆಲ್ ಇತ್ಯಾದಿ ಪ್ರದೇಶಗಳಲ್ಲಿ ಡ್ರಗ್ಸ್ ಪೂರೈಕೆಯಾಗುತ್ತಿದೆ. ಸಿನಿಮಾ ರಂಗದಲ್ಲಿನ ಡ್ರಗ್ಸ್ ಜಾಲದ ಬಗ್ಗೆಯೂ ತನಿಖೆಯಾಗಲಿ. ಅದರ ಹೊರತುಪಡಿಸಿದ ಪ್ರದೇಶಗಳಲ್ಲಿ ಇರುವ ಡ್ರಗ್ಸ್ ಮಾಫಿಯಾ ಬಗ್ಗೆಯೂ ತನಿಖೆಯಾಗಬೇಕು. ಈಗಲಾದರೂ ಎಲ್ಲರೂ ಒಟ್ಟಾಗಿ ಈ ಡ್ರಗ್ಸ್ ಮಾಫಿಯಾವನ್ನು ಮಟ್ಟಹಾಕಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.