ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಪ್ರಶಾಂತ್ ರಂಕ ಸ್ಪೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದು, ನಟಿ ಸಂಜನಾ ಗಲ್ರಾಣಿ ಜೊತೆ ಸೇರಿ ತಾನು ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿರುವುದಾಗಿ ಹೇಳಿದ್ದಾನೆನ್ನಲಾಗಿದೆ.
ಡ್ರಗ್ಸ್ ಪ್ರಕರಣದ ಆರೋಪಿಗಳು ಬಾಯ್ಬಿಟ್ಟ ಎಲ್ಲಾ ಮಾಹಿತಿಗಳನ್ನು ಹಾಗೂ ವಶಕ್ಕೆ ಪಡೆದಿದ್ದ ವಸ್ತುಗಳೆಲ್ಲದರ ಬಗ್ಗೆಯೂ ಸಿಸಿಬಿ ಅಧಿಕಾರಿಗಳು ನ್ಯಾಯಾಲಯಕ್ಕೆ ನೀಡಿದ್ದ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಸಿಸಿಬಿ ವರದಿಯ ಕೆಲ ಮಾಹಿತಿಗಳು ಇದೀಗ ಬಹಿರಂಗವಾಗಿದೆ.
ಸಂಜನಾ ಜೊತೆ ಸೇರಿ ಪ್ರಶಾಂತ್ ರಂಕ ಡ್ರಗ್ಸ್ ವ್ಯವಹಾರ ಮಾಡುತ್ತಿದ್ದು, ಗೋವಾ, ಮುಂಬೈ, ಆಂಧ್ರ ಪ್ರದೇಶ, ಪಂಜಾಬ್ ರಾಜ್ಯಗಳಲ್ಲಿ ನಡೆಯುವ ಹಲವು ಪಾರ್ಟಿಗಳಲ್ಲಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದುದಾಗಿ ರಂಕ ತಿಳಿಸಿದ್ದಾನೆ ಎನ್ನಲಾಗಿದೆ. ಅಲ್ಲದೇ ವಿದೇಶಗಳಲ್ಲಿ ನಡೆಯುವ ಹಲವು ಪಾರ್ಟಿಗಳಿಗೂ ಡ್ರಗ್ಸ್ ಸಪ್ಲೈ ಮಾಡುತ್ತಿದ್ದುದಾಗಿ ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗಿದೆ.
ಅಲ್ಲದೇ ನಟ-ನಟಿಯರು, ಸಾಫ್ಟ್ ವೇರ್ ಇಂಜಿನಿಯರ್ ಗಳು, ರಾಜಕಾರಣಿಗಳು, ರಾಜಕಾರಣಿಗಳ ಮಕ್ಕಳ ಜತೆ ತಮಗೆ ನಿಕಟ ಸಂಪರ್ಕವಿದ್ದು, ಅವರೆಲ್ಲರೂ ತಮ್ಮ ಗ್ರಾಹಕರಾಗಿದ್ದಾರೆ ಎಂಬುದನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಇನ್ನು ಸಂಜನಾ ಬಳಿಯಿಂದ ವಶಕ್ಕೆ ಪಡೆದಿರುವ 5 ಮೊಬೈಲ್ ಗಳಲ್ಲಿ ಕೂಡ ಈ ಬಗ್ಗೆ ಹಲವು ಮಾಹಿತಿಗಳು ಲಭ್ಯವಾಗಿದ್ದಾಗಿ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ನೀಡಿದ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.