ಬೆಗಳೂರು: ಡ್ರಗ್ಸ್ ಪ್ರಕರಣಕ್ಕೂ ನನಗೂ ಯಾವ ಸಂಬಂಧವೂ ಇಲ್ಲ. ನನ್ನ ವೃತ್ತಿ ಜೀವನವೇ ಬೇರೆ. ನಾನು ಅಂತಹ ಯಾವುದೇ ಪಾರ್ಟಿಗಳಲ್ಲಿ ಭಾಗಿಯಾಗಿಲ್ಲ, ಈ ಬಗ್ಗೆ ನನಗೆ ಮಾಹಿತಿಯೂ ಇಲ್ಲ ಎಂದು ಕ್ರಿಕೆಟಿಗ ಅಯ್ಯಪ್ಪ ತಿಳಿಸಿದ್ದಾರೆ.
ಡ್ರಗ್ಸ್ ಪ್ರಕರಣ ಸಂಬಂಧ ಐಎಸ್ ಡಿ ನೋಟೀಸ್ ಹಿನ್ನೆಲೆಯಲ್ಲಿ ವಿಚಾರಣೆ ಎದುರಿಸಿರುವ ಅಯ್ಯಪ್ಪ ಸುದ್ದಿಗಾರರೊಂದಿಗೆ ಮಾತನಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಬಂದಾಗ ನನಗೆ ಶಾಕ್ ಆಯ್ತು. ನನಗೂ ಈ ಪ್ರಕರಣಕ್ಕೂ ಯಾವುದೇ ರೀತಿಯ ನಂಟಿಲ್ಲ.
ಆದರೂ ಪೊಲೀಸರು ನೋಟಿಸ್ ನೀಡಿದ್ದರಿಂದ ವಿಚಾರಣೆಗೆ ಹಾಜರಾಗಿ ಬಂದಿದ್ದೇನೆ. ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ ಎಂದರು.
ನನ್ನ ವೃತ್ತಿ ಜೀವನವೇ ಬೇರೆ. ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ನನಗೆ ಡ್ರಗ್ಸ್ ಸೇವಿಸುವವರ ಬಗ್ಗೆಯೂ ಮಾಹಿತಿಯಿಲ್ಲ. ನಾನು ನನ್ನ ಪಾಡಿಗೆ ಕೋಚಿಂಗ್ ಮಾಡಿಕೊಂಡು ಇದ್ದೇನೆ. ಮದುವೆಗೂ ಮುಂಚೆ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದೆ. ಮದುವೆ ಬಳಿಕ ಯಾವ ಪಾರ್ಟಿಗಳಲ್ಲೂ ಭಾಗಿಯಾಗುತ್ತಿಲ್ಲ ಎಂದು ಹೇಳಿದರು.