ಬೆಂಗಳೂರು: ಡ್ರಗ್ಸ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗಳೊಂದಿಗೆ ಬಗೆದಷ್ಟು ಹೊಸ ವಿಷಯಗಳು ಹೊರ ಬರುತ್ತಲೇ ಇವೆ. ಪ್ರಕರಣ ಸಂಬಂಧ ಮತ್ತೋರ್ವ ಡ್ರಗ್ಸ್ ಪೆಡ್ಲರ್ ನನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಬರೋಬ್ಬರಿ 14 ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದೆ.
ಡ್ರಗ್ಸ್ ಪೆಡ್ಲರ್ ಸಂಗೀತ್ ದಂತಪುಡಿ ಎಂಬಾತನನ್ನು ಸಿಸಿಬಿ ನಿನ್ನೆ ವಶಕ್ಕೆ ಪಡೆದು ರಾತ್ರಿಯಿಡಿ ವಿಚಾರಣೆ ನಡೆಸಿದೆ. ಸುದೀರ್ಘ ವಿಚಾರಣೆಯಲ್ಲಿ ಆತನ ನೆಟ್ ವರ್ಕ್ ಬಗ್ಗೆ ಮಾಹಿತಿ ಕಲೆ ಹಾಕಿದೆ.
ಸಂಗೀತ್ ದಂತಪುಡಿ ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿದ್ದು, ಸದಾಶಿವನಗರದ ಫ್ಲ್ಯಾಟ್ ಒಂದರಲ್ಲಿ ವಾಸಿಸುತ್ತಿದ್ದ. ಈತ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಆಪ್ತನಾಗಿದ್ದ ಮಾತ್ರವಲ್ಲ ಕೆಲ ವರ್ಷ ಅವರ ಕಾರು ಚಾಲಕನಾಗಿಯೂ ಕೆಲಸ ಮಾಡಿದ್ದ ಎನ್ನಲಾಗಿದೆ.
ದಂತಪುಡಿ ಬೆಂಗಳೂರು ಹಾಗೂ ಮುಂಬೈಗಳಲ್ಲಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದ. ದೊಡ್ಡ ದೊಡ್ಡ ಉದ್ಯಮಿಗಳು, ರಾಜಕಾರಣಿಗಳು, ಅವರ ಮಕ್ಕಳು, ಕೆಲ ಸ್ಟಾರ್ ಗಳ ಜೊತೆಯೂ ಈತ ನಂಟು ಹೊಂದಿದ್ದು, ಅವರಿಗೂ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ. ಅಲ್ಲದೇ ಈತ ಕೆಲ ಇವೆಂಟ್ ಆಯೋಜಕರ ಜೊತೆಯೂ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ತಿಳಿದುಬಂದಿದೆ. 14 ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿ ಹಲವು ಮಾಹಿತಿ ಕಲೆ ಹಾಕಿರುವ ಸಿಸಿಬಿ ಅಧಿಕಾರಿಗಳು ದಂತಪುಡಿಯನ್ನು ಬಿಟ್ಟು ಕಳುಹಿಸಿದ್ದಾರೆ.