ಬೆಂಗಳೂರು: ಡ್ರಗ್ಸ್ ಆರೋಪಿ ರಾಹುಲ್ ಜೊತೆ ತಮ್ಮ ಫೋಟೊ ಇರುವ ಬಗ್ಗೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್. ಅಶೋಕ್ ನನಗೂ ರಾಹುಲ್ ಗೂ ಯಾವುದೇ ಸಂಬಂಧವಿಲ್ಲ. ಕಾರ್ಯಕರ್ತನ ಮನೆಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಹೋದಾಗ ಆತ ತೆಗೆಸಿಕೊಂಡ ಫೋಟೋ ಅದು ಎಂದು ಹೇಳಿದ್ದಾರೆ.
ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ರಾಹುಲ್ ಗೆ ರಾಜಕೀಯ ಹಾಗೂ ಪೊಲೀಸ್ ಅಧಿಕಾರಿಗಳ ಜತೆ ನಿಕಟ ಸಂಬಂಧವಿದೆ ಎಂಬ ಅಂಶ ಬಯಲಾಗಿದೆ. ಇದರ ಬೆನ್ನಲ್ಲೇ ರಾಹುಲ್ ಜೊತೆಗೆ ಕಂದಾಯ ಸಚಿವ ಆರ್. ಅಶೋಕ್, ಬೆಂಗಳೂರು ಮಾಜಿ ಕಮೀಷನರ್ ಭಾಸ್ಕರ್ ರಾವ್ ಇರುವ ಫೋಟೋಗಳು ಭಾರಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಕಂದಾಯ ಸಚಿವರು, ಫೋಟೋ ಇದ್ದ ಮಾತ್ರಕ್ಕೆ ಅಪರಾಧಿನಾ? ಎಂದು ಪ್ರಶ್ನಿಸಿದ್ದಾರೆ.
ಭಾಸ್ಕರ್ ರಾವ್ ಜತೆಗೂ ರಾಹುಲ್ ಇರುವ ಫೋಟೋ ಇದೆ. ಪ್ರಶಾಂತ್ ಸಂಬರಗಿ ಜತೆಯೂ ರಾಹುಲ್ ಫೋಟೋ ತೆಗೆಸಿಕೊಂಡಿದ್ದಾನೆ. ಇನ್ನು ಮಾಸ್ಕ್ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ರಾಗಿಣಿ ಬಂದಿದ್ದರು. ಅವರ ಜತೆಗೂ ನಮ್ಮ ಫೋಟೋ ಇದೆ. ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಜತೆಯೂ ರಾಗಿಣಿ ಫೋಟೋ ತೆಗೆಸಿಕೊಂಡಿದ್ದಾರೆ ಹಾಗಂದ ಮಾತ್ರಕ್ಕೆ ಎಲ್ಲರೂ ಅಪರಾಧಿಗಳೇ? ಸಾರ್ವಜನಿಕ ಬದುಕಿನಲ್ಲಿದ್ದಾಗ ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯ. ಫೋಟೋ ತೆಗೆಸಿಕೊಂಡಿಲ್ಲ ಎಂದರೆ ಗರ್ವ ಅಂತಾರೆ ಎಂದು ಹೇಳಿದರು.
ಇನ್ನು ನಾನು ಜೀವನದಲ್ಲಿ ಇಸ್ಪೀಟ್ ಎಲೆಯನ್ನೇ ನೋಡಿಲ್ಲ. ಇನ್ನು ಕ್ಯಾಸಿನೋ ಹೇಗೆ ನೋಡಲಿ? ಜಮೀರ್ ಅಹ್ಮದ್ ಗೆ ಮುಸ್ಲಿಂ ನಾಯಕನಾಗುವ ಆಸೆ. ಡ್ರಗ್ಸ್ ಪ್ರಕರಣ, ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ ಪ್ರಕರಣ, ರಾಮ ಮಂದಿರ ವಿಚಾರ ಹೀಗೆ ಎಲ್ಲಾ ವಿಚಾರದಲ್ಲೂ ಮುಂದೆ ಬರುತ್ತಿದ್ದಾರೆ. ಜಾಫರ್ ಷರೀಫ್ ನಂತರ ತಾನು ಲೀಡರ್ ಆಗಬೇಕು ಎಂದು ಜಮೀರ್ ಹೀಗೆ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.