ರಾಗಿಣಿ ದ್ವಿವೇದಿ ಸದ್ಯ ಚರ್ಚೆಯಲ್ಲಿರುವ ನಟಿ. ಡ್ರಗ್ಸ್ ದಂಧೆಯಲ್ಲಿ ಕೇಳಿ ಬರುತ್ತಿರುವ ಹೆಸರುಗಳಲ್ಲಿ ರಾಗಿಣಿ ಹೆಸರು ಮೊದಲಿದೆ. ಇವರ ಆಪ್ತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಡ್ರಗ್ಸ್ ವಿಚಾರ ಹೊರತುಪಡಿಸಿ ಇದೀಗ ಬೇರೊಂದು ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ ಈ ನಟಿ.
ಹೌದು, ಬಿಜೆಪಿ ಪಾಳೆಯದಲ್ಲಿ ಇದ್ದ ಈ ನಟಿ ಇದೀಗ ಕೈ ಹಿಡಿಯಲು ಹೊರಟಿದ್ದಾರೆನ್ನಲಾಗಿದೆ. ಬಿಜೆಪಿ ಸೇರ್ಪಡೆಗೊಂಡಿದ್ದ ರಾಗಿಣಿಗೆ ಈ ಪಕ್ಷದಲ್ಲಿ ಯಾವುದೇ ಸ್ಥಾನಮಾನ ದೊರೆತಿರಲಿಲ್ಲ. ಇದರಿಂದ ಬೇಸರ ಕೂಡ ಆಗಿದ್ದರು. ಆದರೆ ಇದೀಗ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರಂತೆ ರಾಗಿಣಿ. ಈಗಾಗಲೇ ಈಶ್ವರ್ ಖಂಡ್ರೆಯವರನ್ನು ಕೂಡ ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆ ಕೂಡ ಮಾಡಿದ್ದಾರೆ ಎನ್ನಲಾಗುತ್ತಿದೆ.
ಅತ್ತ ಬಿಜೆಪಿ ಬಿಟ್ಟು ಕಾಂಗ್ರೆಸ್‌ನತ್ತ ಮುಖ ಮಾಡಿರುವ ಈ ನಟಿಗೆ ಇದೀಗ ಡ್ರಗ್ಸ್ ದಂಧೆ ಉರುಳು ಸುತ್ತಿಕೊಳ್ಳುತ್ತಿದೆ. ಹೀಗಿದ್ದಾಗ ಕಾಂಗ್ರೆಸ್ ಇವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾ ಅನ್ನೋದು ಸದ್ಯದ ಪ್ರಶ್ನೆ. ಜೊತೆಗೆ ಡ್ರಗ್ಸ್ ವಿಚಾರದಲ್ಲಿ ರಾಗಿಣಿ ಭಾಗಿಯಾಗಿದ್ದು ಒಂದೊಮ್ಮೆ ಸಾಬೀತಾದರೆ ಇವರ ಚಿತ್ರರಂಗ ಹಾಗೂ ರಾಜಕೀಯ ಭವಿಷ್ಯ ಏನು ಎಂಬುದು ಕುತೂಹಲ.