ಸ್ಯಾಂಡಲ್ ವುಡ್ ನ ಕೆಲ ನಟ – ನಟಿಯರು ಡ್ರಗ್ಸ್ ದಂಧೆಕೋರರ ಜೊತೆಗೆ ನಂಟು ಹೊಂದಿದ್ದಾರೆಂಬ ವಿಚಾರ ಈಗಾಗಲೇ ಬಹಿರಂಗವಾಗಿದೆ. ನಟಿ ರಾಗಿಣಿ ಆಪ್ತ ರವಿಶಂಕರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಪೊಲೀಸರು ಆತನನ್ನು ಈಗ ಬಂಧನಕ್ಕೆ ಒಳಪಡಿಸಿದ್ದಾರೆ.
ವಿಚಾರಣೆ ವೇಳೆ ಆತ ನೀಡಿರುವ ಮಾಹಿತಿಯನ್ನಾಧರಸಿ ಇಂದು ಬೆಳಿಗ್ಗೆ ಯಲಹಂಕದಲ್ಲಿರುವ ರಾಗಿಣಿ ನಿವಾಸದ ಮೇಲೆ ದಾಳಿ ನಡೆಸಿರುವ ಪೊಲೀಸರು ನಾಲ್ಕು ಮೊಬೈಲ್, ಎರಡು ಲ್ಯಾಪ್ ಟಾಪ್ ವಶಕ್ಕೆ ಪಡೆಯುವುದರ ಜೊತೆಗೆ ನಟಿ ರಾಗಿಣಿಯವರನ್ನೂ ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಕಛೇರಿಗೆ ಕರೆದೊಯ್ದಿದ್ದಾರೆ.
ಈ ಮೊದಲು ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್ ಎಂಬಾತನನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ಸಂಜನಾಗೂ ನೋಟೀಸ್ ನೀಡಿದ್ದಾರೆಂದು ಹೇಳಲಾಗಿತ್ತು. ಇದೀಗ ರಾಗಿಣಿಯನ್ನು ವಿಚಾರಣೆಗೆ ಕರೆದೊಯ್ದಿರುವುದು ಡ್ರಗ್ಸ್ ದಂಧೆಕೋರರ ಜೊತೆ ನಂಟು ಹೊಂದಿದ್ದ ಇತರೆ ನಟ – ನಟಿಯರಲ್ಲಿ ನಡುಕ ಹುಟ್ಟಿಸಿದೆ ಎಂದು ಹೇಳಲಾಗಿದೆ.
ಶರ್ಮಿಳಾ ಮಾಂಡ್ರೆಯವರ ಹೆಸರೂ ಸಹ ಸಿಸಿಬಿ ಅಧಿಕಾರಿಗಳ ಪಟ್ಟಿಯಲ್ಲಿದೆ ಎನ್ನಲಾಗಿದ್ದು, ಆದರೆ ಅವರು ಕೊರೊನಾ ಸೋಂಕಿಗೊಳಗಾಗಿರುವ ಕಾರಣ ಸದ್ಯಕ್ಕೆ ಬೀಸುವ ದೊಣ್ಣೆಯಿಂದ ಪಾರಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ತಮಗೆ ಸಿಕ್ಕಿರುವ ಮಾಹಿತಿಯನ್ವಯ ಕೆಲ ನಟ – ನಟಿಯರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟೀಸ್ ನೀಡಲಿದ್ದಾರೆನ್ನಲಾಗುತ್ತಿದೆ.