ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ 6 ಆರೋಪಿಗಳನ್ನು ಇಂದು ಡೋಪಿಂಗ್ ಟೆಸ್ಟ್ ಗೆ ಒಳಪಡಿಸಲಾಗಿದೆ.
ಪ್ರಕರಣ ಸಂಬಂಧ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ, ರಾಹುಲ್, ಲೂಮ್ ಪೆಪ್ಪರ್, ನಯೀಜ್, ಪ್ರಶಾಂತ್ ಅವರಿಗೆ ಮಲ್ಲೇಶ್ವರಂ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಡೋಪಿಂಗ್ ಟೆಸ್ಟ್ ಮಾಡಿಸಲಾಗಿದೆ. ಆರೋಪಿಗಳ ಕೂದಲು, ಉಗುರು, ಮೂತ್ರ ಹಾಗೂ ರಕ್ತದ ಮಾದರಿಯನ್ನು ಪಡೆದು ಎಸ್ಎಫ್ಎಲ್ ಗೆ ರವಾನಿಸಲಾಗಿದೆ.
ಡೋಪಿಂಗ್ ಟೆಸ್ಟ್ ಗೆ ನಟಿ ಸಂಜನಾ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಉಸಿರಾಟದ ತೊಂದರೆಯಲ್ಲಿರುವ ತನಗೆ ನಾರ್ಮಲ್ ಚಿಕಿತ್ಸೆ ಕೊಡಿಸುವುದಾಗಿ ಹೇಳಿ ಕರೆತಂದು ಈಗ ಡೋಪಿಂಗ್ ಟೆಸ್ಟ್ ಮಾಡುತ್ತಿರುವುದು ಎಷ್ಟು ಸರಿ ಎಂದು ಕಿರಿಕ್ ಮಾಡಿದ್ದಾರೆ ಎನ್ನಲಾಗಿದೆ.
ಡೋಪಿಂಗ್ ಟೆಸ್ಟ್ ಬಳಿಕ ಸಂಜನಾ ಹಾಗೂ ರಾಗಿಣಿಯವರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದ್ದರೆ, ಉಳಿದ ನಾಲ್ವರು ಆರೋಪಿಗಳನ್ನು ಸಿಸಿಬಿ ಕಚೇರಿಗೆ ಕರೆದೊಯ್ಯಲಾಗಿದೆ. ಒಟ್ಟಾರೆ ಡೋಪಿಂಗ್ ಟೆಸ್ಟ್ ವರದಿಯಲ್ಲಿ ನಟಿಯರಿಬ್ಬರೂ ಡ್ರಗ್ಸ್ ಸೇವನೆ ಮಾಡುತ್ತಿದ್ದರೇ ಎಂಬ ಅಂಶ ಬಯಲಾಗಲಿದ್ದು, ವರದಿಗಾಗಿ ಸಿಸಿಬಿ ಪೊಲೀಸರು ಕಾಯುತ್ತಿದ್ದಾರೆ.