ಲಾಕ್ ಡೌನ್ ಸಂದರ್ಭದಲ್ಲಿ ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸಿದ್ದ ರೈತ ಸಮುದಾಯ ಲಾಕ್ ಡೌನ್ ಸಡಿಲಿಕೆ ಬಳಿಕ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.
ಮುಂಗಾರು ಮಳೆಯೂ ಆರಂಭವಾಗಿರುವ ಕಾರಣ ಹೊಲವನ್ನು ಹದ ಮಾಡಿ ಬಿತ್ತನೆ ಕಾರ್ಯಕ್ಕೆ ಸಿದ್ಧತೆ ನಡೆಯುತ್ತಿದೆ. ಇದರ ಮಧ್ಯೆ ಕಳೆದ 15 ದಿನಗಳಿಂದ ತೈಲ ದರ ಏರಿಕೆಯಾಗುತ್ತಿರುವುದು ರೈತ ಸಮುದಾಯವನ್ನು ಕಂಗೆಡಿಸಿದೆ.
ಅದರಲ್ಲೂ ಡೀಸೆಲ್ ಬೆಲೆ ಈ ಹದಿನೈದು ದಿನಗಳ ಅವಧಿಯಲ್ಲಿ ಬರೋಬ್ಬರಿ 8.88 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಉಳುಮೆ ಮಾಡಲು ಟ್ರಾಕ್ಟರ್ ಬಳಸುವ ಕಾರಣ ಭಾರಿ ದುಬಾರಿಯಾಗಿ ಪರಿಣಮಿಸಿದೆ.
ಇದರ ಏರಿಕೆ ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿದ್ದು, ದೈನಂದಿನ ವಸ್ತುಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆಯಿದೆ. ಕೊರೊನಾ ಸಂಕಷ್ಟದ ನಡುವೆ ನಿರಂತರ ತೈಲ ದರ ಏರಿಕೆ ಸಾರ್ವಜನಿಕರನ್ನು ಹೈರಾಣಾಗುವಂತೆ ಮಾಡಿದೆ.