ಬೆಂಗಳೂರು: ರಾಜ್ಯದಲ್ಲಿ ಖಾಲಿಯಿಲ್ಲದ ಸಿಎಂ ಕುರ್ಚಿಗೆ ಕಾಂಗ್ರೆಸ್ ನಾಯಕರು ಪೈಪೋಟಿ ನಡೆಸಿದ್ದಾರೆ. ಡಿ.ಕೆ. ಶಿವಕುಮಾರ್ ಬೆಳಿಗ್ಗೆ ಬಂದು ಸಿಎಂ ಕುರ್ಚಿಗೆ ಟವೆಲ್ ಹಾಕ್ತಾರೆ, ಸಂಜೆ ಬಂದು ಸಿದ್ದರಾಮಯ್ಯನವರು ಅದನ್ನು ಎತ್ಕೊಂಡು ಹೋಗ್ತಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಲಗ್ಗೆರೆಯಲ್ಲಿ ಉಪಚುನಾವಣಾ ಪ್ರಚಾರ ನಡೆಸಿದ ಆರ್. ಅಶೋಕ್, ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ ಗೆ ಅಧಿಕಾರವನ್ನು ನೀಡಿದರೂ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಹಾಗಾಗಿ ಜನ ತಕ್ಕ ಪಾಠ ಕಲಿಸಿದ್ದಾರೆ. ಮನೆಯ ಮುಂದೆ ದೃಷ್ಟಿಯಾಗಬಾರದೆಂದು ರಾಕ್ಷಸನ ಮುಖ ಇಡುತ್ತಾರೆ. ಹಾಗೇ ದೃಷ್ಟಿಬೊಟ್ಟಿನಂತೆ ಅವರು ಒಂದು ಸ್ಥಾನವನ್ನು ಗೆದ್ದಿದ್ದಾರೆ ಎಂದು ಲೇವಡಿ ಮಾಡಿದರು.
ಸಮ್ಮಿಶ್ರ ಸರ್ಕಾರ ಮಾಡಿ ಕುಮಾರಸ್ವಾಮಿ ದ್ರೋಹ ಬಗೆದರು, ಕಾಂಗ್ರೆಸ್ ನವರು, ಊಟದಲ್ಲಿ, ನೀರಿನಲ್ಲಿ ಹಾಕಿದ ವಿಷ ಕುಡಿದು ವಿಷಕಂಠನಾದೆ ಎಂದು ಕುಮಾರಸ್ವಾಮಿ ಕಣ್ಣೀರಿಡುತ್ತಿದ್ದಾರೆ. ಕುಮಾರಸ್ವಾಮಿಗೆ ದಿನವೂ ಊಟದಲ್ಲಿ ವಿಷ ಹಾಕಿದವರಾರು ಎಂದು ಪ್ರಶ್ನಿಸಿದರು.