ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಅಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ನಡೆಯುವುದು ಶತಃಸಿದ್ದ ಎಂದು ವಾಟಾಳ್ ನಾಗರಾಜ್ ಘೋಷಿಸಿದ್ದಾರೆ.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಂದ್ ಮಾಡುವವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿದ್ದಾರೆ. ನಾಡು-ನುಡಿ-ಜಲದ ರಕ್ಷಣೆಗಾಗಿ ನಾವುಗಳು ಜೈಲಿಗೆ ಹೋಗಲೂ ಸಿದ್ದ ಎಂದು ಗುಡುಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಕನ್ನಡ ಪರ ಹೋರಾಟಗಾರರನ್ನು ಕೆಲವರು ರೋಲ್ ಕಾಲ್ ಹೋರಾಟಗಾರರು ಎಂದು ಕರೆದಿದ್ದಾರೆ. ಆದರೆ ಬಸವನಗೌಡ ಪಾಟೀಲ್ ಯತ್ನಾಳ್, ಮಂತ್ರಿ ಸ್ಥಾನಕ್ಕಾಗಿ ಮಾಡುತ್ತಿರುವುದು ರೋಲ್ ಕಾಲ್ ಅಲ್ಲವೇ…? 17 ಜನ ರೋಲ್ ಕಾಲ್ ಆಗಿದ್ದಕ್ಕೆ ಯಡಿಯೂರಪ್ಪನವರ ಸರ್ಕಾರ ರಚನೆಯಾಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸಾ.ರಾ. ಗೋವಿಂದು ಮಾತನಾಡಿ, ಯಾವುದೇ ಪೂರ್ವ ತಯಾರಿಯಿಲ್ಲದೆ ಕೇವಲ ಚುನಾವಣೆಗೋಸ್ಕರ ತರಾತುರಿಯಲ್ಲಿ ಪ್ರಾಧಿಕಾರ ಘೋಷಣೆ ಮಾಡಲಾಗಿದೆ. ಇದಕ್ಕೂ ಮುನ್ನ ಯಾರಾದಾದರೂ ಅಭಿಪ್ರಾಯ ಕೇಳಿದ್ದೀರಾ ಎಂದು ಪ್ರಶ್ನಿಸಿದರು. ಡಿಸೆಂಬರ್ 5 ರ ಕರ್ನಾಟಕ ಬಂದ್ ಗೆ ಬಹುತೇಕರು ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದರು.