ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರುವಂತೆ ಡಿಪ್ಲೊಮೋ ಕೋರ್ಸುಗಳ ಪಠ್ಯವನ್ನು ಅಮೂಲಾಗ್ರವಾಗಿ ಪರಿಷ್ಕರಣೆ ಮಾಡಲು ಸರಕಾರ ನಿರ್ಧರಿಸಿದೆ ಎಂದು ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಪ್ರಕಟಿಸಿದ್ದಾರೆ.
ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಹುಟ್ಟೂರು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಮಂಗಳವಾರ ವಿಶ್ವೇಶ್ವರಯ್ಯ ಇಂಟರ್ನ್ಯಾಷನಲ್ ಇನ್ಸಿಟ್ಯೂಟ್ ಫಾರ್ ಸೂಪರ್ ಟ್ರೇನರ್ಸ್ ಸಂಸ್ಥೆಯ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಅತ್ಯಂತ ಪರಿಣಾಮಕಾರಿಯಾಗಿ ಹಾಗೂ ಸರಳವಾಗಿ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ, ಅದರಲ್ಲೂ ಏನನ್ನು ಕಲಿಯಬೇಕೋ ನಿರ್ದಿಷ್ಟವಾಗಿ ಆ ಪಠ್ಯವನ್ನೇ ಕಲಿಯುವ ನಿಟ್ಟಿನಲ್ಲಿ ಡಿಪ್ಲೊಮೋ ಪಠ್ಯ ಬದಲಾಗುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕೌಶಲ್ಯಪೂರ್ಣ ಶಿಕ್ಷಣ ನೀಡುವುದು ಮತ್ತು ಅದು ವಿದ್ಯಾರ್ಥಿಯ ಭವಿಷ್ಯದ ಜತೆಗೆ ದೇಶ ಕಟ್ಟುವುದಕ್ಕೂ ಸಹಕಾರಿ ಆಗಬೇಕು. ವಿನಾಕಾರಣ ಅಗತ್ಯವಿಲ್ಲದ ವಿಷಯಗಳನ್ನು ಓದಿಕೊಂಡು ಕಾಲಹರಣ ಮಾಡುವುದರಲ್ಲಿ ಅರ್ಥವೇ ಇಲ್ಲ. ಕಾಲಕ್ಕೆ ತಕ್ಕಂತೆ, ಅಗತ್ಯಕ್ಕೆ ತಕ್ಕಂತೆ ಬದಲಾವಣೆಗಳು ಆಗುತ್ತಿರಬೇಕು. ಈ ನಿಟ್ಟಿನಲ್ಲಿ ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿ ಬಂದಿದೆ. ಅದನ್ನು ಕೂಡ ಹಂತ ಹಂತವಾಗಿ ರಾಜ್ಯದಲ್ಲಿ ಜಾರಿ ಮಾಡಲು ಸರಕಾರ ಮುಂದಾಗಿದೆ. ಶಿಕ್ಷಣ ಮತ್ತು ಕೌಶಲ್ಯತೆ ಜತೆ ಜತೆಯಾಗಿಯೇ ನಡೆಯಬೇಕು. ಅಭಿವೃದ್ಧಿಗೆ ಇದೇ ಬುನಾದಿ ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ.