ಬೆಂಗಳೂರು: ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಸಿಎಂ ಯಡಿಯೂರಪ್ಪ ವಿರುದ್ಧದ ಪ್ರಕರಣ ರದ್ದು ಮಾಡಲು ಹೈಕೋರ್ಟ್ ನಿರಾಕರಿಸಿದೆ. ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪವಿದೆ. ಆರ್.ವಿ.ದೇಶಪಾಂಡೆ ಕೇಸ್ ನಲ್ಲಿ ಯಡಿಯೂರಪ್ಪ ಆರೋಪಿಯಾಗಿದ್ದಾರೆ. ಲೋಕಾಯುಕ್ತ ವಿಶೇಷ ಕೋರ್ಟ್ ನಲ್ಲಿ ಸಿಎಂ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ದೇವರಬೀಸನಹಳ್ಳಿಯಲ್ಲಿ ಐಟಿ ಕಾರಿಡಾರ್ ಗಾಗಿ ಭೂಸ್ವಾಧೀನ ಮಾಡಿಕೊಂಡಿದ್ದರು ವಾಸುದೇವ ರೆಡ್ಡಿ ಎಂಬುವವರು ಖಾಸಗಿ ದೂರು ನೀಡಿದ್ದರು. 2016ರಲ್ಲೇ ಯಡಿಯೂರಪ್ಪ ತಮ್ಮ ವಿರುದ್ಧದ ತನಿಖೆಗೆ ಸ್ಟೇ ತಂದಿದ್ದರು. ಇದರಿಂದಾಗಿ ತನಿಖೆಗೆ ಹಿನ್ನಡೆಯಾಗುತ್ತಿದೆ ಎಂದರು.
ಡಿನೋಟಿಫಿಕೇಶನ್ ಪ್ರಕರಣ ರದ್ದಿಗೆ ಹೈಕೋರ್ಟ್ ನಿರಾಕರಿಸಿದೆ. ಲೋಕಾಯುಕ್ತ ಪೊಲೀಸರ ನಿಗಾದಲ್ಲಿ ತನಿಖೆಯಾಗಬೇಕು. ಆದರೆ ಎಲ್ಲಾ ಸಂಸ್ಥೆಗಳು ಸಿಎಂ ಬಿ ಎಸ್ ವೈ ಅಧೀನದಲ್ಲಿದೆ. ಹೀಗಾಗಿ ತನಿಖೆ ಮೇಲೆ ಸಿಎಂ ಪ್ರಭಾವ ಬೀರುವ ಸಾಧ್ಯತೆಯಿದೆ. ಗಂಭೀರ ಆರೋಪವಿರುವಾಗ ಸಿಎಂ ಯಡಿಯೂರಪ್ಪ ಅಧಿಕಾರದಲ್ಲಿ ಮುಂದುವರೆಯಲು ಹೇಗೆ ಸಾಧ್ಯ? ಮಾನ ಮರ್ಯಾದೆ ಇದ್ದರೆ ತಕ್ಷಣ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಭಂಡತನದಲ್ಲಿ ಅಧಿಕಾರದಲ್ಲಿ ಮುಂದುವರಿದರೆ ಹೇಗೆ ರಾಜೀನಾಮೆ ಕೊಡಿಸಬೇಕೋ ಹಾಗೆ ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ.