ಸಾಮಾಜಿಕ ಜಾಲತಾಣದ ಪೋಸ್ಟ್ ಕಾರಣಕ್ಕೆ ಕಳೆದ ರಾತ್ರಿ ಹೊತ್ತಿ ಉರಿದಿರುವ ರಾಜ್ಯ ರಾಜಧಾನಿ ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ಈಗ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ.
ಫೇಸ್ ಬುಕ್ ಪೋಸ್ಟ್ ಹಾಕಿದ್ದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿ ನವೀನ್ ಸೇರಿದಂತೆ ಗಲಭೆಗೆ ಕಾರಣರಾದ 130 ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದರ ಮಧ್ಯೆ ಇಲ್ಲಿನ ವ್ಯಾಪಾರಸ್ಥರು ತಮ್ಮ ಅಂಗಡಿ – ಮುಂಗಟ್ಟುಗಳನ್ನು ಇಂದು ಬಂದ್ ಮಾಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಗಲಭೆ ಕುರಿತಂತೆ ಸಮಗ್ರ ಮಾಹಿತಿ ಪಡೆಯುತ್ತಿದ್ದು, ಇಂದು ಮಧ್ಯಾಹ್ನದ ವೇಳೆಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿರುವ ಸಚಿವ ಆರ್. ಅಶೋಕ್ ಮತ್ತಷ್ಟು ಮಾಹಿತಿ ನೀಡಲಿದ್ದಾರೆನ್ನಲಾಗಿದೆ. ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಕೂಡಾ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರಕ್ಷಣೆ ಕೋರುವ ಸಾಧ್ಯತೆ ಇದೆ.